
4 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್: ಡಿಸಿಪಿ ರವಿಶಂಕರ್ ಕೆ.
ಮಂಗಳೂರು: ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದುಕೊಂಡು ಹೋಗುವಾಗ ಮಕ್ಕಳ ಸುರಕ್ಷೆ ಉದ್ದೇಶ ದಿಂದ ಸುಪ್ರೀಂಕೋರ್ಟ್ ಕೆಲವು ನಿರ್ದೇಶನ ನೀಡಿದೆ. ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಲ್ಲೂ ಇದನ್ನು ಉಲ್ಲೇಖೀಸಲಾಗಿದೆ. 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದುಕೊಂಡು ಹೋಗುವಾಗ ಅವರಿಗೆ “ಸೇಫ್ಟಿ ಹಾರ್ನೆಸ್ ಬೆಲ್ಟ್’ ಅಳವಡಿಸಬೇಕು. 4 ವರ್ಷ ಮೇಲ್ಪಟ್ಟ ಮಕ್ಕಳು ಐಎಸ್‌ಐ ಮಾರ್ಕ್ ಹೊಂದಿರುವ ಹೆಲ್ಮೆಟ್ ಧರಿಸಬೇಕು. ಹೆತ್ತವರು ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದುಕೊಂಡು ಹೋಗುವಾಗ ಈ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ರವಿಶಂಕರ್ ಕೆ. ತಿಳಿಸಿದ್ದಾರೆ.
ಸೀಟ್ ಬೆಲ್ಟ್ ಕಡ್ಡಾಯ..
ಕಾರಿನಲ್ಲಿ ಸಂಚರಿಸುವಾಗ ಚಾಲಕ ಮಾತ್ರವಲ್ಲದೆ ಸಹಸವಾರರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಚಾಲಕ ಮಾತ್ರ ಸೀಟ್ ಬೆಲ್ಟ್ ಧರಿಸುತ್ತಿರುವುದು ಕಂಡು ಬರುತ್ತಿದ್ದು, ಚಾಲಕನ ಪಕ್ಕದಲ್ಲಿ ಕುಳಿತುಕೊಂಡಿರುವವರು ಮತ್ತು ಹಿಂದೆ ಕುಳಿತುಕೊಳ್ಳುವವರು ಕೂಡ ತಮ್ಮ ಸುರಕ್ಷೆಗಾಗಿ ಸೀಟ್ ಬೆಲ್ಟ್ ಧರಿಸಬೇಕು. ಈಗಾಗಲೇ ನಗರದಲ್ಲಿ ಎಐ ಆಧಾರಿತ ಕೆಮರಾಗಳನ್ನು ಅಳವಡಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಕೆಮರಾದಲ್ಲಿ ಸೆರೆಯಾಗಿ ದಂಡ ವಿಧಿಸಲಾಗುತ್ತಿದೆ. ಸಾರ್ವಜನಿಕರು ಈ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ರವಿಶಂಕರ್ ಕೆ. ಅವರು ತಿಳಿಸಿದ್ದಾರೆ.
ಕಮಿಷನರೆಟ್ ವ್ಯಾಪ್ತಿಯ ವಿವಿಧ ಶಾಲೆಗಳ ಬಳಿಕ ಸಂಚಾರ ಪೊಲೀಸರು ಗುರುವಾರ “ಸೇಫ್ಟಿ ಹಾರ್ನೆಸ್ ಬೆಲ್ಟ್’ ಮತ್ತು ಹೆಲ್ಮೆಟ್ ಕಡ್ಡಾಯದ ಬಗ್ಗೆ ಹೆತ್ತವರಿಗೆ ಜಾಗೃತಿ ಮೂಡಿಸಿದರು. ಮುಂದಿನ ದಿನಗಳಲ್ಲಿ ಕೇಸ್ ಹಾಕಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದರು.