
ಸೂಲಿಬೆಲೆಗೆ ಪೊಲೀಸ್ ನೋಟಿಸ್: ‘ಕುಂದಾಪುರಕ್ಕೆ ಬಂದೇ ಬರುತ್ತೇನೆ’-ಸೂಲಿಬೆಲೆ
ಕುಂದಾಪುರ: ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡಬಾರದು ಎಂದು ತಾಕೀತು ಮಾಡಿ ಚಕ್ರವರ್ತಿ ಸೂಲಿಬೆಲೆ ಅವರಿಗೆ ಕುಂದಾಪುರ ಪೊಲೀಸರು ನೋಟಿಸ್ ನೀಡಿದ್ದಾರೆ.
ಕುಂದಾಪುರದಲ್ಲಿ ‘ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ’ ಎಂಬ ವಿಚಾರವಾಗಿ ಚಕ್ರವರ್ತಿ ಸೂಲಿಬೆಲೆ ಅವರಿಂದ ಜೂ.20, 21 ಮತ್ತು 22ರಂದು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಪೊಲೀಸ್ ಅಧಿಕಾರಿಗಳು, ಉಪನ್ಯಾಸದಲ್ಲಿ ರಾಜಕೀಯ ಮಾತನಾಡಬಾರದು ಹಾಗೂ ಯಾವುದೇ ನಾಯಕರ ತೇಜೋವಧೆ ಮಾಡಬಾರದು ಎಂದು ಆಯೋಜಕರಿಗೆ ಹಾಗೂ ಸೂಲಿಬೆಲೆ ಅವರಿಗೆ ಷರತ್ತು ವಿಧಿಸಿ ನೊಟೀಸ್ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಕ್ರವರ್ತಿ ಸೂಲಿಬೆಲೆ, ಕರ್ನಾಟಕದಲ್ಲಿ ರಾಜಕೀಯ ಮಾತಾಡಬಾರದು ಎಂಬ ಕಾನೂನು ಯಾವಾಗಿನಿಂದ ಜಾರಿಯಾಗಿದೆ ಎಂದು ಪ್ರಶ್ನಿಸಿದ್ದಾರೆ. ಇದು ನನ್ನನ್ನು ಅಘೋಷಿತ ಗಡಿಪಾರು ಮಾಡಿಸುವ ಪ್ರಯತ್ನವಾಗಿದೆ. ನನಗೆ ನೋಟಿಸ್ ಹೊಸತಲ್ಲ, ಬಹಳ ಕಡೆಗಳಲ್ಲಿ ನೋಟಿಸ್ ಕೊಟ್ಟಿದ್ದಾರೆ. ಈ ಬಾರಿ ರಾಜಕೀಯ ಮಾತನಾಡಬಾರದು, ಯಾವುದೇ ನಾಯಕರ ತೇಜೋವಧೆ ಮಾಡಬಾರದು ಎಂದಿದ್ದಾರೆ. ನೆಹರು, ಇಂದಿರಾ, ರಾಜೀವ್ ಕುರಿತಂತೆ ಮಾತನಾಡಬಾರದು ಎಂದು ಅರ್ಥವೇ ? ಘಜ್ನಿ, ಘೋರಿ, ಔರಂಗಜೇಬ್ ಮುಂತಾದ ಕ್ರೂರಿಗಳ ತೇಜೋವಧೆ ಮಾಡಬಾರದೆಂದು ಅರ್ಥವೇ? ಈ ಬಗ್ಗೆ ಕುಂದಾಪುರ ಪೊಲೀಸರೇ ಮಾಹಿತಿ ಕೊಟ್ಟರೆ ಉತ್ತಮ. ನಾನು ಕುಂದಾಪುರಕ್ಕೆ ಬರಬಾರದೆಂದು ಹೇಳುವವರು ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ, ನಾನು ಕುಂದಾಪುರಕ್ಕೆ ಬಂದೇ ಬರುತ್ತೇನೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮ ಆಯೋಜಕ ನಿರಂಜನ್ ಶೆಟ್ಟಿ ಪ್ರತಿಕ್ರಿಯಿಸಿದ್ದು ಎನ್‌ಎಸ್‌ಯುಐ ಕಡೆಯವರು ಚಕ್ರವರ್ತಿ ಸೂಲಿಬೆಲೆ ಕುಂದಾಪುರಕ್ಕೆ ಬರಲು ಬಿಡಬಾರದು ಎಂದು ಪೊಲೀಸರಿಗೆ ಮನವಿ ನೀಡಿದ್ದಾರೆ. ಕಾಶ್ಮೀರದ ವಿಚಾರ ಮಾತನಾಡದೇ ಅಖಂಡ ಭಾರತದ ಬಗ್ಗೆ ಉಪನ್ಯಾಸ ಅಸಾಧ್ಯ. ಕಾಶ್ಮೀರ ಕಾಂಗ್ರೆಸ್ ಕಾಲದಲ್ಲಿ ಸಮಸ್ಯೆ ಆಗಿ ಉಳಿದಿತ್ತು. ಈ ವಿಚಾರ ಜನರಿಗೆ ತಿಳಿಯಬಾರದು ಅನ್ನೋದು ಇವರ ಉದ್ದೇಶ ಇರಬಹುದು. ಕಾಂಗ್ರೆಸ್ ಬಣ್ಣ ಬಯಲಾಗುತ್ತೆ ಎನ್ನುವ ಕಾರಣಕ್ಕೆ ತಡೆಯಲು ಮುಂದಾಗಿದ್ದಾರೆ. ನಾವು ಕಾರ್ಯಕ್ರಮ ಮಾಡಿಯೇ ಮಾಡುತ್ತೇವೆ ಎಂದಿದ್ದಾರೆ.