
ಪೊಲೀಸ್ ಮಧ್ಯರಾತ್ರಿ ರೈಡ್: ತನಿಖೆ ಆರಂಭ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಹಿಂದು ಸಮುದಾಯದ ಮನೆಗಳಿಗೆ ಪೊಲೀಸರು ನಡೆಸಿದ ಮಧ್ಯರಾತ್ರಿ ರೈಡ್ ಕಾರ್ಯಾಚರಣೆಗೆ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಂಗಳೂರಿಗೆ ಆಗಮಿಸಿ ತನಿಖೆ ಆರಂಭಿಸಿದೆ.
ಡಿವೈಎಸ್ಪಿ ಮಣಿಂದರ್ ಗಿಲ್ ನೇತೃತ್ವದ ತಂಡ ಶುಕ್ರವಾರ ತನಿಖೆ ಆರಂಭಿಸಿದೆ. ದೂರುದಾರ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರಿಂದ ತನಿಖಾಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ತಂಡ ಪುತ್ತೂರು, ಸುಳ್ಯ ಹಾಗೂ ಕಡಬ ಭಾಗದಲ್ಲಿ ಹಲವರ ವಿಚಾರಣೆ ಆರಂಭಿಸಿದೆ.
ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಕೆಲವು ಮುಖಂಡರನ್ನು ತಂಡ ಭೇಟಿ ಮಾಡಿದೆ. ಪೊಲೀಸರು ಮಧ್ಯರಾತ್ರಿ ಭೇಟಿ ಕೊಟ್ಟ ಕಾರ್ಯಕರ್ತರು ಹಾಗೂ ಮುಖಂಡರ ಅಪರಾಧ ಹಿನ್ನೆಲೆ, ಸಂಘಟನೆ ಚಟುವಟಿಕೆ ಹಾಗೂ ಪೊಲೀಸ್ ಮನೆ ಭೇಟಿ, ಸಿಸಿಟಿವಿ ಫುಟೇಜ್ ಸಂಗ್ರಹ ನಡೆಸುತ್ತಿದೆ.
ಶಾಸಕ ಡಾ.ಭರತ್ ಶೆಟ್ಟಿ ದೂರಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವಹಕ್ಕು ಆಯೋಗ ದ.ಕ. ಜಿಲ್ಲಾ ಪೊಲೀಸರ ವಿರುದ್ಧ ತನಿಖೆ ಆದೇಶಿಸಿತ್ತು. ಈ ದೂರಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಯೋಗದ ಡಿಜಿಗೆ ಸೂಚನೆ ನೀಡಿತ್ತು. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಎರಡು ವಾರದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.