
ತುಳು ಭಾಷೆಗೆ ನಿರ್ಬಂಧ: ವಿವಾದ ಸೃಸ್ಟಿಸಿದ ಜಿ.ಪಂ. ಸಿ.ಇ.ಒ. ಪತ್ರ
ಮಂಗಳೂರು: ತುಳು ಭಾಷೆಗೆ ವಿಶೇಷ ಸ್ಥಾನಮಾನದ ಬೇಡಿಕೆಯ ನಡುವೆಯೇ ದ.ಕ. ಜಿಲ್ಲಾ ಪಂಚಾಯ್ತಿ ಸಿಇಒ ಅವರು ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗಳಲ್ಲಿತುಳು ಭಾಷೆ ಬಳಕೆ ನಿರ್ಬಂಧ ಕುರಿತಂತೆ ಸಂಘಟನೆಯೊಂದರ ಬೇಡಿಕೆ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲ ತಾಲೂಕು ಪಂಚಾಯ್ತಿ ಅಧಿಕಾರಿಗಳಿಗೆ ಸೂಚನಾ ಪತ್ರ ಬರೆದಿರುವುದು ಬಹಿರಂಗಗೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಕಾರ್ಕಳದ ಯಶಸ್ವಿ ನಾಗರಿಕರ ಸೇವಾ ಸಂಘದ ಸಂಚಾಲಕ ಮುರಳೀಧರ ಎನ್ನುವವರು ದ.ಕ. ಜಿ.ಪಂ. ಈ ಬಗ್ಗೆ 12-2-2025ರಂದು ದ.ಕ. ಜಿಲ್ಲಾ ಪಂಚಾಯ್ತಿಗೆ ಪತ್ರ ಬರೆದಿದ್ದರು. ಈ
ಪತ್ರದಲ್ಲಿ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚರ್ಚಿಸುವಾಗ ತುಳು ಭಾಷೆ ಬಳಕೆ ಮಾಡದಂತೆ ಮತ್ತು ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡುವಂತೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು. ಈ ವಾಕ್ಯವನ್ನು ಉಲ್ಲೇಖಿಸಿ ಈ ಮನವಿ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿ.ಪಂ. ಸಿಇಒ ಪರವಾಗಿ ಅಧಿಕಾರಿಯೊಬ್ಬರು ಎಲ್ಲ ತಾಲೂಕು ಪಂಚಾಯ್ತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಏಪ್ರಿಲ್ 22ರಂದು ಡಿಜಿಟಲ್ ಸಹಿಯೊಂದಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಕೈಗೊಂಡ ಕ್ರಮದ ಬಗ್ಗೆ
ದೂರುದಾರರಿಗೂ ಮಾಹಿತಿ ಪ್ರತಿ ಕಳುಹಿಸಿದ್ದಾರೆ. ಇದೀಗ ತಾಲೂಕು ಪಂಚಾಯ್ತಿಗಳಿಗಳಿಗೆ ಪತ್ರ ಬರೆದು ಎರಡು ತಿಂಗಳು ಕಳೆದಿದೆ. ಈಗ ಈ ಪತ್ರ ವೈರಲ್ ಆಗಿದ್ದು, ಜಿ.ಪಂ. ಅಧಿಕಾರಿಗಳು ತುಳು ವಿರೋಧಿ ಧೋರಣೆ ತಳೆಯುತ್ತಿದ್ದಾರೆ ಎಂಬ ಅರ್ಥದಲ್ಲಿ ವ್ಯಾಪಕ ವಿರೋಧಕ್ಕೆ ಕಾರಣವಾಗುತ್ತಿದೆ.
ಪತ್ರ ವಾಪಸ್ ಪಡೆಯಬೇಕು..
ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ಜನಪ್ರತಿನಿಧಿಗಳು ಚರ್ಚಿಸುವ ಸಂಧರ್ಭದಲ್ಲಿ ತುಳುಭಾಷೆ ಬಳಕೆ ಮಾಡುವುದಕ್ಕೆ ಕಾನೂನಿನ ನಿಯಾಮನುಸಾರ ಯಾವುದೇ ನಿರ್ಬಂಧ
ಇರುವುದಿಲ್ಲ. ಅಲ್ಲದೆ ಪತ್ರದಲ್ಲಿ ತುಳು ಭಾಷೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೂ ವಿವಾದಕ್ಕೆ ಕಾರಣವಾಗುವ ಈ ಪತ್ರವನ್ನು ಕೂಡಲೇ ಜಿ.ಪಂ. ವಾಪಸ್ ಪಡೆಯಬೇಕು ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.