
ಜೂ.23ರಂದು ಸ್ಥಳೀಯ ಸಂಸ್ಥೆಗಳ ಮುಂಭಾಗ ಪ್ರತಿಭಟನೆ: ಸತೀಶ್ ಕುಂಪಲ
ಮಂಗಳೂರು: ಜನರ ಸಮಸ್ಯೆಗಳಿಗೆ ಸ್ಪಂದನೆ ಇಲ್ಲದ ಜನವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಜೂ.23ರಂದು ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎಲ್ಲಾ ಗ್ರಾಪಂ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಂಗಳೂರು ಮಹಾನಗರಪಾಲಿಕೆ ಕಚೇರಿಗಳ ಮುಂಭಾಗದಲ್ಲಿ ಏಕಕಾಲದಲ್ಲಿ ಬೆಳಗ್ಗೆ 10ರಿಂದ ಪ್ರತಿಭಟನೆ ನಡೆಯಲಿದೆ. ಜನರು ಸವಲತ್ತುಗಳು ಸರಿಯಾಗಿ ಲಭ್ಯವಾಗದೆ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ, 9/11 ಸಮಸ್ಯೆ ಪರಿಹರಿಸುವುದು ಸಾಧ್ಯವಾಗಿಲ್ಲ ಮುಡಾದಲ್ಲಿ 620 ಅರ್ಜಿಗಳು, ಪುಡಾದಲ್ಲಿ 100ಕ್ಕೂ ಅಧಿಕ ಅರ್ಜಿಗಳು ಕಳೆದ ಮೂರು ತಿಂಗಳಿಂದ ಕೊಳೆಯುತ್ತಿವೆ. ಸಂಧ್ಯಾಸುರಕ್ಷಾ ಯೋಜನೆಯಲ್ಲಿ ಜಿಲ್ಲೆಯ 42184 ಮಂದಿ ಲಾನುಭವಿಗಳಿಗೆ ನೆರವು ಒದಗಿಸುವುದಕ್ಕೆ ಪುನರ್ ಪರಿಶೀಲನೆ ಮಾಡಲು ಸರಕಾರ ಸೂಚಿಸಿದೆ. ಮೊಬೈಲ್ ಇದೆ ಎಂಬಿತ್ಯಾದಿ ಸಣ್ಣಪುಟ್ಟ ವಿಚಾರಗಳನ್ನು ಕಾರಣವಾಗಿ ಕೊಡಲಾಗುತ್ತಿದೆ. ಕಡುಬಡತನದಲ್ಲಿ ಇರುವವರಿಗೆ ಯೋಜನೆಯನ್ನೇ ಮೊಟಕುಗೊಳಿಸುವ ಹುನ್ನಾರ ಇದು. ಇನ್ನೊಂದೆಡೆ ಅರ್ಹ ಲಾನುಭವಿಗಳಿಗೇ ಕಳೆದ 6 ತಿಂಗಳಿಂದ ಸರಿಯಾಗಿ ಪಿಂಚಣಿ ಬರುತ್ತಿಲ್ಲ. ಆಶ್ರಯ ಯೋಜನೆಯಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮನೆಗಳನ್ನು ಒದಗಿಸಿತ್ತು. ಈ ಸರ್ಕಾರ ಪುತ್ತೂರಿಗೆ 250 ಮನೆ ಬಿಟ್ಟರೆ ಬೇರೆ ಯಾವ ತಾಲೂಕಿಗೂ ಆಶ್ರಯ ಮನೆ ನೀಡಿಲ್ಲ. ಅನೇಕ ಬಿಪಿಎಲ್ ಕಾರ್ಡುಗಳನ್ನು ತಿರಸ್ಕರಿಸಲಾಗಿದೆ, ಹೊಸದಾಗಿ ಅರ್ಜಿ ಸಲ್ಲಿಕೆ ಕಳೆದ ಮೂರು ತಿಂಗಳಿಂದ ಆಗುತ್ತಿಲ್ಲ, ಅಕ್ರಮ ಸಕ್ರಮ ಕಡತ ವಿಲೇವಾರಿ ನಡೆಯುತ್ತಿಲ್ಲ, ಅರ್ಜಿಗಳು ಕೊಳೆಯುತ್ತಿವೆ ಎಂದರು.
ಸಂತ್ರಸ್ತರಿಗೆ ಅನ್ಯಾಯ:
ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಕಳೆದ ಎರಡು ವರ್ಷಗಳಲ್ಲಿ ಕರಾವಳಿಯ ಶಾಸಕರು ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ ಯಾವುದೇ ಶಿಲಾನ್ಯಾಸ ನಡೆಸಿಲ್ಲ. ಅಭಿವೃದ್ಧಿಗಾಗಿ ಒಂದೇ ಒಂದು ರುಪಾಯಿ ಅನುದಾನ ಸರ್ಕಾರ ಬಿಡುಗಡೆಗೊಳಿಸಿಲ್ಲ. ಹೊಸ ಕಾಮಗಾರಿಗೆ ಯಾವುದೇ ಅನುದಾನಗಳು ಬಿಡುಗಡೆಯಾಗುತ್ತಿಲ್ಲ. ಇದು ಕರಾವಳಿಯ ಕಾಂಗ್ರೆಸ್ ಶಾಸಕರನ್ನೂ ಹೊರತಾಗಿಲ್ಲ. ಕಳೆದ ವರ್ಷದ ಪ್ರಾಕೃತಿಕ ವಿಕೋಪದ ಪರಿಹಾರ ಮೊತ್ತ ಇನ್ನೂ ಪಾವತಿಯಾಗಿಲ್ಲ. ಕರಾವಳಿ, ಮಲೆನಾಡಿಗೆ ಆಗಿನ ಬಿಜೆಪಿ ಸರ್ಕಾರ ತಡೆಗೋಡೆ ಹಾನಿಗೆ ಪರಿಹಾರ ನೀಡಿತ್ತು. ಕಾಂಗ್ರೆಸ್ ಸರ್ಕಾರದ ತಡೆಗೋಡೆ ಹಾನಿಗೆ ಎನ್‌ಡಿಆರ್‌ಎಫ್ ನಿಯಮ ಪ್ರಕಾರ ಪರಿಹಾರ ನೀಡಲು ಸಾಧ್ಯವಿಲ್ಲ ಎನ್ನುತ್ತಿದೆ. ಅಲ್ಲದೆ ಮನೆ ಹಾನಿ, ಮಳೆ ಹಾನಿ ಪರಿಹಾರ ಮೊತ್ತವನ್ನು ಗಣನೀಯವಾಗಿ ಕಡಿಮೆ ಮಾಡಿ ಸಂತ್ರಸ್ತರಿಗೆ ಅನ್ಯಾಯ ಎಸಗುತ್ತಿದೆ ಎಂದರು.
ಪಾಲಿಕೆ ಮೂಡಾ ಕಲೆಕ್ಷನ್ ಕೇಂದ್ರ:
ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ಮಹಾನಗರ ಪಾಲಿಕೆ ಹಾಗೂ ಮೂಡಾ ಕಲೆಕ್ಷನ್ ಕೇಂದ್ರವಾಗಿ ಅವ್ಯವಸ್ಥೆಯ ಆಗರವಾಗಿದೆ. ಮೂಡಾದಲ್ಲಿ ಅರ್ಜಿ ಸಲ್ಲಿಸಿದರೆ ಅನುಮತಿಗೆ ಬೆಂಗಳೂರಿಗೆ ಯಾಕೆ ತೆರಳಬೇಕು ಎಂಬುದು ಎಲ್ಲರಿಗೂ ಅರ್ಥವಾಗುವ ಸಂಗತಿ. ಅಷ್ಟರ ಮಟ್ಟಿಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮಂಗಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧ ಇಲ್ಲ, ವೈದ್ಯರೇ ಕೈಯಿಂದ ಹಣ ಹಾಕಿ ಬಡವರಿಗೆ ಔಷಧ ನೀಡುವಂತಾಗಿದೆ. ಪ್ರಾಕೃತಿಕ ತೊಂದರೆ ಸೇರಿದಂತೆ ಯಾವುದೇ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರನ್ನು ಸೇರಿಸಿ ಸಭೆ ನಡೆಸುತ್ತಿಲ್ಲ. ಇಲ್ಲಿ ಭ್ರಷ್ಟಾಚಾರ ಡಬ್ಬಲ್ ರೇಟ್ ಕಾರ್ಡ್ ಆಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಜೂ.23ರಂದು ಬಿಜೆಪಿ ನಗರ ಪಾಲಿಕೆ ಎಂದು ಪ್ರತಿಭಟನೆ ನಡೆಸಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಪ್ರಮುಖರಾದ ಯತೀಶ್ ಅರ್ವಾರ್, ಪ್ರೇಮಾನಂದ ಶೆಟ್ಟಿ ಮುಂತಾದವರಿದ್ದರು.