
ಮಂಗಳೂರು ವಿಮಾನ ನಿಲ್ದಾಣದಿಂದ ಹರಿಯುತ್ತಿರುವ ಮಳೆ ನೀರಿನಿಂದಾಗಿ ಸುತ್ತಮುತ್ತಲಿನ ಜನವಸತಿ ಪ್ರದೇಶಗಳಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಶಾಸಕ ಡಾ. ವೈ. ಭರತ್ ಶೆಟ್ಟಿ ಅಧಿಕಾರಿಗಳಿಗೆ ಸೂಚನೆ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನಲ್ಲಿರುವ ಪ್ರದೇಶವಾದ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತೀವ್ರ ಮಳೆಯಿಂದಾಗಿ ಹಾಗೂ ವಿಮಾನ ನಿಲ್ದಾಣದಿಂದ ಹರಿಯುತ್ತಿರುವ ಮಳೆ ನೀರಿನಿಂದಾಗಿ ಸಮಸ್ಯೆ ಉಂಟಾಗಿರುವ ವಸತಿ ಪ್ರದೇಶಗಳಿಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಈಗಾಗಲೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಹಾಗೂ ಅದಾನಿ ಅಧಿಕಾರಿಗಳೊಂದಿಗೆ ಮಂಗಳೂರು ವಿಮಾನ ನಿಲ್ದಾಣದಿಂದ ಜನವಸತಿ ಪ್ರದೇಶಗಳಿಗೆ ಹರಿಯುತ್ತಿರುವ ಮಳೆ ನೀರಿನಿಂದ ಉಂಟಾಗುತ್ತಿರುವ ಸಮಸ್ಯೆಯ ಪರಿಹಾರಕ್ಕಾಗಿ ಮೂಲ್ಕಿ-ಮೂಡಬಿದ್ರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ಹಾಗೂ ಸ್ಥಳೀಯರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿತ್ತು, ಈ ಸಭೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಪರಿಹಾರಕ್ಕಾಗಿ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಲಾಗಿದೆ. ಕಳೆದ ಅನೇಕ ವರ್ಷಗಳಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಜನವಸತಿ ಪ್ರದೇಶಗಳಲ್ಲಿ, ವಿಮಾನ ನಿಲ್ದಾಣದಿಂದ ಸರಿಯಾದ ಕ್ರಮಗಳಿಲ್ಲದೆ ಹರಿಯುತ್ತಿರುವ ಮಳೆ ನೀರಿನಿಂದಾಗಿ ಸಮಸ್ಯೆ ಉಂಟಾಗುತ್ತಿದೆ. ಇದರ ಶಾಶ್ವತ ಪರಿಹಾರಕ್ಕಾಗಿ ಉತ್ತಮ ಕಾಂಕ್ರಿಟ್ ತೋಡುಗಳ ನಿರ್ಮಾಣವಾಗಿ ರಾಜಕಾಲುವೆಗೆ ಮಳೆನೀರನ್ನು ಸಂಪರ್ಕಿಸುವ ಕಾರ್ಯವಾಗಬೇಕು. ಈ ಕುರಿತು ಆದಷ್ಟು ಬೇಗ ನಿರ್ಣಯ ಕೈಗೊಳ್ಳುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಶಾಸಕರು ಮಾಧ್ಯಮಗಳಿಗೆ ತಿಳಿಸಿದರು.
ಇದೇ ವೇಳೆ ಕಂದಾವರ ಪಂಚಾಯತ್ ಭಾಗದಲ್ಲಿ ಅತೀವ ಮಳೆಯಿಂದಾಗಿ ತೊಂದರೆ ಉಂಟಾದ ಪ್ರದೇಶಗಳಿಗೆ ಶಾಸಕರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಶೀಘ್ರವಾಗಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.