
ಹಾದಿ ತಪ್ಪಿದ ಅಕ್ರಮಸಕ್ರಮ-ಮನೆ ನಿರ್ಮಾಣಕ್ಕೆ ಸಂಕಷ್ಟ-ಜೂ.23 ರಂದು ಸ್ಥಳೀಯಾಡಳಿತದ ಮುಂದೆ ಪ್ರತಿಭಟನೆ
ಪುತ್ತೂರು: ರಾಜ್ಯ ಸರ್ಕಾರದ ಆಡಳಿತ ವೈಫಲ್ಯದಿಂದ ಬಡಜನತೆಗೆ ತೀವ್ರ ತೊಂದರೆಗೆ ಒಳಗಾಗುತ್ತಿದ್ದಾರೆ. ಮನೆ ಕಟ್ಟಲು ಕಲ್ಲು-ಮಣ್ಣು ಸಿಗದೆ ಪರದಾಡುತ್ತಿದ್ದಾರೆ. ಬಡವರಿಗಾಗಿಯೇ ಇರುವ ಆಶ್ರಯ ಯೋಜನೆಯ ಮನೆಗಳು ಅರ್ಹರಿಗೆ ಸಿಗುತ್ತಿಲ್ಲ. ಅಕ್ರಮ-ಸಕ್ರಮ ಅರ್ಜಿಗಳಿಗೆ ಸರಿಯಾಗಿ ವಿಲೇವಾರಿಯಾಗದೆ ಹಾದಿ ತಪ್ಪುತ್ತಿದೆ. ಯಾರದೋ ಜಾಗ ಇನ್ಯಾರಿಗೋ ಸ್ವಾಧೀನವಾಗುತ್ತಿದೆ. ಜೂ.23ರಂದು ಸ್ಥಳೀಯಾಡಳಿತದ ಮುಂದೆ ಪ್ರತಿಭಟನೆ ನಡೆಯಲಿದೆ. ರಾಜ್ಯ ಸರ್ಕಾರದ ಕಣ್ಣು ತೆರೆಸುವ ನಿಟ್ಟಿನಲ್ಲಿ ಜನರ ಭಾವನೆಗಳಿಗೆ ಸ್ಪಂಧಿಸುವ ಪಕ್ಷ ಬಿಜೆಪಿ ಎಂಬ ನಿಟ್ಟಿನಲ್ಲಿ ಈ ಪ್ರತಿಭಟನೆ ನಡೆಯಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಮಂಗಳವಾರ ಕಲ್ಲೇಗ ಭಾರತ್ ಮಾತಾ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ನಡೆದ ವಿಕಸಿತ ಭಾರತ ಸಂಕಲ್ಪ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ನಾಯಕರ ಚಿಂತನೆಯಂತೆ ಕಾರ್ಯಕ್ರಮಗಳನ್ನು ಸಂಘಟನಾತ್ಮಕವಾಗಿ ರೂಪಿಸಬೇಕು. ಕೇಂದ್ರ ಸರ್ಕಾರದ ಯೋಜನೆಗಳು ತಳಮಟ್ಟದ ಜನರಿಗೆ ಮುಟ್ಟಬೇಕು. ಗಿಡ ನೆಡುವ ಹಾಗೂ ಪೋಷಣೆ ಮಾಡುವ ಮೂಲಕ ವಿಶ್ವಯೋಗ ದಿನಾಚರಣೆ ಆಚರಿಸಬೇಕು. 9/11 ಎಂಬುವುದು ಜಿಲ್ಲೆಯಲ್ಲಿ ದೊಡ್ಡ ಪೆಡಂಬೂತವಾಗಿ ಕಾಡುತ್ತಿದೆ ಎಂದು ಅವರು ಹೇಳಿದರು.
‘ವಿಕಸಿತ ಭಾರತ ಸಂಕಲ್ಪ’ ಕುರಿತು ಬಿಜೆಪಿ ಮುಖಂಡ ವಿಕಾಸ್ ಪುತ್ತೂರು, ‘ಸಂಕಲ್ಪ ದಿಂದ ಸಾಧನೆಯ ತನಕ ವಿಕಸಿತ ಭಾರತ’ ಬಗ್ಗೆ ಜಿಲ್ಲಾ ಸಂಚಾಲಕ ಹರೀಶ್ ಕಂಜಿಪಿಲಿ, ಮುಂದಿನ ಕಾರ್ಯಯೋಜನೆ ಬಗ್ಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಮಾತನಾಡಿದರು. ಪ್ರತಿಜ್ಞಾ ವಿಧಿಯನ್ನು ಸಹ ಸಂಚಾಲಕ ನಿತೀಶ್ ಕುಮಾರ್ ಶಾಂತಿವನ ನಡೆಸಿದರು.
ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಪ್ರಮುಖರಾದ ಅನಿತ್ ತೆಂಕಿಲ, ಉಮೇಶ್ ಕೋಡಿಬೈಲು, ಆರ್. ಸಿ. ನಾರಾಯಣ, ಪ್ರಸನ್ನ ಮಾರ್ತ, ಸೀತಾರಾಮ ಬೆಳಾಲು, ಮೋಹನ್ ಪಿ. ಎಸ್. ಉಪಸ್ಥಿತರಿದ್ದರು.
ವಿಭಾಗ ಸಹ ಸಂಚಾಲಕ ಯುವರಾಜ್ ಪೆರಿಯತ್ತೋಡಿ ಸ್ವಾಗತಿಸಿದರು. ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಪುನಿತ್ ಮಾಡತ್ತಾರು ವಂದಿಸಿದರು. ಕುಮಾರ್ ನರಸಿಂಹ ಭಟ್, ಸುನೀಲ್‌ಕುಮಾರ್ ದಡ್ಡು ಕಾರ್ಯಕ್ರಮ ನಿರೂಪಿಸಿದರು.