
ಭಾರತೀಯ ನೌಕಾಪಡೆಯಲ್ಲಿ ಪೈಲೆಟ್ ಆಗಿ ಪೆರ್ನಂಕಿಲ ಸೀಮಾ ತೆಂಡೂಲ್ಕರ್
ಶಿರ್ವ: ಪೆರ್ನಂಕಿಲ ಸದಾನಂದ ನಾಯಕ್(ತೆಂಡುಲ್ಕರ್) ಮತ್ತು ಜಯಶ್ರೀ ತೆಂಡೂಲ್ಕರ್ ದಂಪತಿಗಳ ಇಬ್ಬರು ಹೆಣ್ಣು ಮಕ್ಕಳಲ್ಲಿ ಕಿರಿಯ ಮಗಳು ಸೀಮಾ ತೆಂಡುಲ್ಕರ್ ಭಾರತೀಯ ನೌಕಾಪಡೆಯಲ್ಲಿ ಪೈಲೆಟ್ ಆಗಿ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹಿರಿಯಡ್ಕ ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್‌ನಲ್ಲಿ ಪೂರೈಸಿ, ಪಿಯುಸಿ ಶಿಕ್ಷಣವನ್ನು ಕಾರ್ಕಳ ಜ್ಞಾನಸುಧಾ ಕಾಲೇಜಿನಲ್ಲಿ ಪಡೆದರು. ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿ ಸೇನೆಯ ಎಸ್.ಎಸ್.ಬಿ ಇಂಟರ್‌ವ್ಯೂನಲ್ಲಿ ಆಯ್ಕೆಯಾಗಿ ಮೆಡಿಕಲ್ ಕ್ಲಿಯರೆನ್ಸ್ ಪಡೆದು ಮೆರಿಟ್ ರ‍್ಯಾಂಕ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಪ್ಟಿನೆಂಟ್ ಆಗಿ ಆಯ್ಕೆಯಾಗಿ ಪ್ರಸ್ತುತ ಕೇರಳದಲ್ಲಿರುವ ಇಂಡಿಯನ್ ನೇವೆಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಬಾಲ್ಯದಿಂದಲೂ ಭಾರತೀಯ ಸೇನೆಗೆ ಸೇರುವ ಉತ್ಕಟ ಇಚ್ಚೆಯಿಂದ ಎನ್‌ಸಿಸಿ ಸೇರಿಕೊಂಡ ತನ್ನ ಸಂಕಲ್ಪ ಈಡೇರಿದ ಬಗ್ಗೆ ಅಭಿಮಾನವನ್ನು ಹೊಂದಿದ್ದಾರೆ.
ಕಾಲೇಜು ದಿನಗಳಲ್ಲಿ ಎನ್‌ಸಿಸಿಯಲ್ಲಿ ತೊಡಗಿಸಿಕೊಂಡ ಇವರು 2022ರ ಗಣರಾಜ್ಯೋತ್ಸವದಂದು ಗಾರ್ಡ್ ಆಫ್ ಆನರ್ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು. ಹಿರಿಯ ಸಹೋದರಿ ಸೌಮ್ಯಾ ಉಜಿರೆ ಎಸ್.ಡಿ.ಎಂ. ಮೆಡಿಕಲ್ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದು ಅಕ್ಯೂಪಂಚರ್(ಸೂಜಿ ಚಿಕಿತ್ಸೆ) ತಜ್ಞೆಯಾಗಿ ಹಡಗು(ಕ್ರೂಜ್)ನಲ್ಲಿ ಉದ್ಯೋಗಿಯಾಗಿದ್ದಾರೆ. ತಂದೆ ಪ್ರಗತಿಪರ ಕೃಷಿಕರಾಗಿದ್ದು, ತಾಯಿ ಹಿರಿಯಡ್ಕ ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್‌ನಲ್ಲಿ ಉಪ ಪ್ರಾಂಶುಪಾಲೆಯಾಗಿ ಕರ್ತವ್ಯದಲ್ಲಿದ್ದಾರೆ.