
ಅಕ್ರಮ ಗಣಿಗಾರಿಕೆ: ಇಬ್ಬರ ವಿರುದ್ಧ ದೂರು ದಾಖಲು
ಬಂಟ್ವಾಳ: ಬಿ.ಮೂಡ ಗ್ರಾಮದ ಪಲ್ಲಮಜಲು ಸಮೀಪದ ಕುವಡ್ಕ ಎಂಬಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿರುವ ಇಬ್ಬರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಹಿರಿಯ ಭೂವಿಜ್ಞಾನಿಯವರ ಕಚೇರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಸಂದೀಪ್ ಜಿ.ಯು. ಅವರ ದೂರಿನ ನಂತರ ಬಿ.ಮೂಡ ಗ್ರಾಮದ ಕುವಡ್ಕ ನಿವಾಸಿಗಳಾದ ಜೋಸೆಫ್ ಡಿ’ಕುನ್ಹ ಹಾಗೂ ಮರ್ವಿನ್ ಗೋವಿಯಸ್ ಅವರ ವಿರುದ್ಧ ಕೇಸು ದಾಖಲಾಗಿದೆ.
ಬಿ.ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿ ಅಕ್ರಮವಾಗಿ ಕಪ್ಪ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಇತ್ತೀಚೆಗೆ ಬಂಟ್ವಾಳ ತಹಶಿಲ್ದಾರ್ ಮೂಲಕ ಜಿಲ್ಲಾಧಿಕಾರಿ ಹಾಗೂ ಗಣಿ ಇಲಾಖೆಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಅಧಿಕಾರಿಗಳು ತನಿಖೆ ನಡೆಸಿದಾಗ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ವಿಚಾರ ಬಯಲಿಗೆ ಬಂದಿತ್ತು.
ಈ ನಿಟ್ಟಿನಲ್ಲಿ ಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಯವರು ನಗರ ಪೊಲೀಸರಿಗೆ ಸೂಚಿಸಿದ್ದರು. ಈ ಅಕ್ರಮ ಗಣಿಗಾರಿಕೆಯ ವೇಳೆ ಸ್ಪೋಟಕ ಬಳಸುವುದರಿಂದ ಇಲ್ಲಿನ ಹಲವು ಮನೆಗಳ ಗೋಡೆಗಳಿಗೆ ಹಾನಿಯಾಗಿದೆ ಎಂದು ಆರೋಪಿಸಲಾಗಿತ್ತು.
ಇದೀಗ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯಿತ್ತಿದೆ.