
ಚಾರ್ಮಾಡಿ ಪರಿಸರದಲ್ಲಿ ವಿಷಪೂರಿತ ಹಾವುಗಳ ಹಾವಳಿ: ಘಾಟ್ ಪ್ರದೇಶದಲ್ಲಿ ಹಾವು ಬಿಡದಂತೆ ಕ್ರಮ ಕೈಗೊಳ್ಳಿ ಸ್ಥಳೀಯರ ಮನವಿ
Tuesday, July 15, 2025
ಬೆಳ್ತಂಗಡಿ: ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಎಲ್ಲೆಲ್ಲಿಂದಲೂ ವಿಷಪೂರಿತ ಹಾವುಗಳನ್ನು ಹಿಡಿದು ತಂದು ಬಿಡುವುದರಿಂದ ಸ್ಥಳೀಯವಾಗಿ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದರು.
ಚಾರ್ಮಾಡಿ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆಯು ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಚಾರ್ಮಾಡಿ ಗ್ರಾಮ ಪಂಚಾಯತ್ ವಠಾರದಲ್ಲಿ ಜು.೧೫ ರಂದು ನಡೆಯಿತು.
ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ವಿವಿಧ ಭಾಗಗಳಿಂದ ವಿಷ ಹಾವುಗಳನ್ನು ತಂದು ಬಿಡುವುದರಿಂದ ಸ್ಥಳೀಯವಾಗಿ ಇರುವ ಮನೆಯವರಿಗೆ ತೊಂದರೆಯಾಗುತ್ತಿದೆ. ಮನೆಗಳಿಗೆ ಹಾಗೂ ಕೃಷಿ ತೋಟಗಳಿಗೆ ವಿಪರೀತ ಹಾವುಗಳು ಬರುವುದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ದಾರಿಯಲ್ಲಿ ನಡೆದಾಡಲು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ದನಗಳಿಗೆ ಹುಲ್ಲು ಕೊಯ್ಯಲು ತೋಟಗಳಿಗೆ ಹೋಗುವಾಗ, ಮೇಯಲು ಕಟ್ಟಲು ಹೋಗಲು ಹೆದರಿಕೆಯಾಗುತ್ತಿದೆ. ಅದ್ದರಿಂದ ಈ ಬಗ್ಗೆ ಹಾವುಗಳನ್ನು ತಂದು ಬಿಡದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಶಾಸಕರಲ್ಲಿ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಶಾಸಕ ಹರೀಶ್ ಪೂಂಜ ಈ ಬಗ್ಗೆ ಹಾವುಗಳನ್ನು ಬಿಡದಂತೆ ಜಾಗೃತಿ ಮೂಡಿಸುವ ಕೆಲಸ ಹಾಗೂ ನಾಮ ಫಲಕ ಹಾಕುವಂತೆ ಸೂಚಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.