
ಶೈಕ್ಷಣಿಕ ಅಭಿವೃದ್ಧಿಗೆ ಸೃಜನಶೀಲತೆ ಅತ್ಯಂತ ಅಗತ್ಯ: ಪ್ರೊ ಪಿ.ಎಲ್ ಧರ್ಮ
ಮಂಗಳೂರು: ಪ್ರಾಧ್ಯಾಪಕರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ಅಭಿವೃದ್ಧಿಗೆ ಸೃಜನಶೀಲತೆಯ ಅಗತ್ಯವಿದೆ. ಅಧ್ಯಯನದ ಜೊತೆಗಿನ ಅಧ್ಯಾಪನೆ, ಅಧ್ಯಾಪನೆಯ ಜೊತೆಗೆ ಸೃಜನಶೀಲ ಬರವಣಿಗೆ ಇವೆಲ್ಲವೂ ಸೇರಿದಾಗ ಶೈಕ್ಷಣಿಕ ಬೆಳವಣಿಗೆ ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ ಪಿ.ಎಲ್ ಧರ್ಮ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ರಾಣಿ ಅಬ್ಬಕ್ಕ ಹಾಲ್‌ನಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ಡಾ. ಭಾರತಿ ಪಿಲಾರ್, ಮತ್ತು ಅಸ್ಸಾಂಷನ್ ಕಾಲೇಜು ಕೇರಳದ ಡಾ. ವಿನ್ಸಿ ಅಬ್ರಹಾಂ ಬರೆದ ‘ಪೈಥಾನ್ ಬೇಸಿಕ್ಸ್ ಅಂಡ್ ಬಿಯೊಂಡ್’ ಹಾಗೂ ‘ಆರ್ ಫಾರ್ ಸ್ಟಾಟಿಸ್ಟಿಕಲ್ ಕಂಪ್ಯೂಟಿಂಗ್’ ಎನ್ನುವ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪೈಥಾನ್ ಬೇಸಿಕ್ಸ್ ಅಂಡ್ ಬಿಯೊಂಡ್’ ಪುಸ್ತಕವನ್ನು ಮಂಗಳೂರು ವಿವಿಯ ಕುಲಪತಿ ಪ್ರೊ ಪಿ.ಎಲ್. ಧರ್ಮ ಲೋಕಾರ್ಪಣೆ ಮಾಡಿದರು. ‘ಆರ್ ಫಾರ್ ಸ್ಟಾಟಿಸ್ಟಿಕಲ್ ಕಂಪ್ಯೂಟಿಂಗ್’ ಪುಸ್ತಕವನ್ನು ಮಂಗಳೂರು ವಿವಿಯ ಕುಲಸಚಿವ ರಾಜು ಮೊಗವೀರ ಅವರು ಬಿಡುಗಡೆ ಮಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ. ದೇವೇಂದ್ರಪ್ಪ ಎಚ್. ಮತ್ತು ಹಣಕಾಸು ಅಧಿಕಾರಿ ಪ್ರೊ. ಸಂಗಪ್ಪ ವೈ. ಪುಸ್ತಕ ಬಿಡುಗಡೆಗೆಯಲ್ಲಿ ಕೈ ಜೋಡಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಲೇಖಕಿ ಡಾ. ಭಾರತಿ ಪಿಲಾರ್ ಅವರು ನಮ್ಮ ಜ್ಞಾನವನ್ನು ಪುಸ್ತಕಗಳ ಮೂಲಕ ಮಾತ್ರ ಮುಂದಿನ ಪೀಳಿಗೆಗೆ ತಲುಪಿಸಬಹುದು. ವಿದ್ಯಾರ್ಥಿಗಳಿಗೆ ಸುಲಭದಲ್ಲಿ ಅರ್ಥವಾಗುವ ಹಾಗೆ ಪೈಥಾನ್ ಮತ್ತು ಆರ್ ಪುಸ್ತಕಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದರು.
ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಬಿ.ಎಚ್. ಶೇಖರ್, ಪ್ರೊ. ಎಚ್.ಎಲ್. ಶಶಿರೇಖಾ, ಭೂಗೋಳಶಾಸ್ತ್ರ ಪ್ರಾಧ್ಯಾಪಕ ಡಿ.ಪಿ. ಅಂಗಡಿ, ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕ ನವೀನ ಕುಮಾರ್, ಜೀವಶಾಸ್ತ್ರ ವಿಭಾಗದ ಪ್ರೊ. ಪ್ರಶಾಂತ್ ನಾಯ್ಕ್, ರಸಾಯನಶಾಸ್ತ್ರ ವಿಭಾಗದ ಭೋಜ ಪೂಜಾರಿ, ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ರತ್ನಾವತಿ ಟಿ., ಗಣಿತಶಾಸ್ತ್ರ ವಿಭಾಗದ ಸುಬ್ರಹ್ಮಣ್ಯ ಭಟ್ ಮತ್ತು ಗಣಕ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.