ಜಾತ್ಯತೀತ ಪರಿಕಲ್ಪನೆಯ ಮೊದಲ ಪತ್ರಕರ್ತ ಹರ್ಮನ್ ಮೊಗ್ಲಿಂಗ್: ಡಾ. ಶೈಲೇಶ್ ರಾಜ್ ಅರಸ್

ಜಾತ್ಯತೀತ ಪರಿಕಲ್ಪನೆಯ ಮೊದಲ ಪತ್ರಕರ್ತ ಹರ್ಮನ್ ಮೊಗ್ಲಿಂಗ್: ಡಾ. ಶೈಲೇಶ್ ರಾಜ್ ಅರಸ್


ಕೊಣಾಜೆ: ‘ಜಾತ್ಯತೀತ ಪರಿಕಲ್ಪನೆಯ ಮೊದಲ ಪತ್ರಕರ್ತ ಹರ್ಮನ್ ಮೊಗ್ಲಿಂಗ್. ಕನ್ನಡ ನಾಡು-ನುಡಿ-ಸಂಸ್ಕೃತಿಯ ಕುರಿತು ಸಂಶೋಧನೆ ನಡೆಸಿದ ಮಹಾಪ್ರಬಂಧಕ್ಕೆ ಸಿಕ್ಕಿದ ಪ್ರಥಮ ಡಾಕ್ಟರೇಟ್ ಪದವಿಯ ಕೀರ್ತಿಯು ಮೊಗ್ಲಿಂಗ್ ಅವರಿಗೆ ಸಲ್ಲುತ್ತದೆ’ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ಅಧ್ಯಕ್ಷ ಮತ್ತು ಪ್ರಾಧ್ಯಾಪಕ ಡಾ. ಶೈಲೇಶ್ ರಾಜ್ ಅರಸ್ ಹೇಳಿದರು. 

ಅವರು ಇಂದು ಮಂಗಳೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಹಾಗೂ ಇತಿಹಾಸ ವಿಭಾಗ ಸಹಯೋಗದೊಂದಿಗೆ ಮಂಗಳಗಂಗೋತ್ರಿಯ ಎಂ.ಸಿ.ಜೆ. ವಿಭಾಗದಲ್ಲಿ ಆಚರಿಸಿದ ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


18ನೇ ಶತಮಾನದಲ್ಲಿ ಬಳಸಿದ ಹರ್ಮನ್ ಮೊಗ್ಲಿಂಗ್ ಅವರ ತಾಂತ್ರಿಕತೆ ಇವತ್ತಿಗೂ ಬಳಕೆಯಲ್ಲಿದೆ. ಸುಳ್ಳು ಸುದ್ದಿ ಎಂಬುದು ಇತ್ತೀಚಿನ ವಿಚಾರ ಅಲ್ಲ, ಅದು 1843 ರಲ್ಲೇ ಇತ್ತು. ಹಾಗಾಗಿ ಜನರಿಗೆ ಸತ್ಯ ಮಾಹಿತಿಯನ್ನು ತಲುಪಿಸುವ ಸಲುವಾಗಿ ‘ಮಂಗಳೂರ ಸಮಾಚಾರ’ ಪತ್ರಿಕೆ ಪ್ರಕಟಿಸಲಾಯಿತು ಎಂದ ಅವರು ಪತ್ರಿಕೋದ್ಯಮ ಸುಳ್ಳು ಸುದ್ದಿಯ ಕೈಗಾರಿಕೆ ಆಗದಂತೆ ತಡೆಗಟ್ಟಲು ಇರುವ ಡೇಟಾ ಪ್ರೊಟೆಕ್ಷನ್ ಆಪ್ ಬಗ್ಗೆ ವಿವರಿಸಿದರು. ಈಗಿನ ಕಾಲದಲ್ಲಿ ಮಾಹಿತಿ ರಾಜ ಕೇಂದ್ರಿತ ಅಲ್ಲ. ಬದಲಿಗೆ ಪ್ರಜಾ ಕೇಂದ್ರಿತವಾದುದು. ಆದರೆ ಈಗ ಮಾಧ್ಯಮಗಳ ಮಾಹಿತಿಯು ವಸ್ತುನಿಷ್ಠತೆ ಕಳೆದುಕೊಳ್ಳುತ್ತಿವೆ ಎಂದರು.

ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ ಡಾ. ಮೋಹನ್ ಎಸ್. ಸಿಂಘೆ ಮಾತನಾಡಿ, ಸತ್ಯಕ್ಕಿರುವ ಶಕ್ತಿ ಸುಳ್ಳಿಗಿಲ್ಲ. ಹಾಗಾಗಿ ಸತ್ಯ ಮಾಹಿತಿ ಹೊರ ಬರಬೇಕು. ಸಮಾಜಕ್ಕೆ ಬೇಕಾದ ಸತ್ಯ ಮಾಹಿತಿ ಯನ್ನು ಕೊಡಬೇಕಾದ ಕಾರ್ಯ ಮಾಧ್ಯಮಗಳು ಮಾಡಬೇಕಾಗಿದೆ. ಸತ್ಯ ನುಡಿಯುವ ಎದೆಗಾರಿಕೆಗಾಗಿ ಕೊಪರ್ ನಿಕಸ್ ಮತ್ತು ಗೆಲಿಲಿಯೋ ಮುಂತಾದ ವಿಜ್ಞಾನಿಗಳು ಕೊಲೆಗೀಡಾದರು. ಆದರೂ ಇತಿಹಾಸದಲ್ಲಿ ಪ್ರಾಣ ಭಯವಿಲ್ಲದೆ ಸತ್ಯಕ್ಕಾಗಿ ಜೀವಿಸುತ್ತಾ ತ್ಯಾಗ ಮಾಡಿದ ಅನೇಕ ಮಹಾ ವ್ಯಕ್ತಿಗಳನ್ನು ನಾವು ಕಾಣಬಹುದು. ಕ್ರೈಸ್ತ ಮಿಶನರಿಗಳು ಕೂಡ ಜಗತ್ತಿನ ಎಲ್ಲ ಕಡೆ ಹೀಗೆ ತ್ಯಾಗ ಮಾಡಿದ್ದೂ ಇದೆ. ನಮ್ಮ ದೇಶದಲ್ಲಿಯೂ ಸಹ ಅಂತಹ ತ್ಯಾಗಮಯಿ ಮಿಷನರಿ ಬಂದುದರಿಂದಾಗಿ ಶಿಕ್ಷಣ ಮಾಧ್ಯಮ ಇನ್ನೂ ಮುಂತಾದ ಕ್ಷೇತ್ರದಲ್ಲಿ ನಾವಿಂದು ಅಪಾರ ಪ್ರಗತಿ ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಶ್ವವಿದ್ಯಾನಿಲಯದ ಕುಲಸಚಿವ ಕೆ. ರಾಜು ಮೊಗವೀರ ಮಾತನಾಡಿ, ಪತ್ರಕರ್ತರಲ್ಲಿ ಸುದ್ದಿಯನ್ನು ವಿಶ್ಲೇಷಿಸುವ ಕೌಶಲ್ಯ ಇರಬೇಕು. ಪತ್ರಕರ್ತರು ಸೂಕ್ಷ್ಮತೆ ಅರ್ಥ ಮಾಡಿಕೊಳ್ಳಬೇಕು. ಒಳ್ಳೆ ರೀತಿಯ ಸುದ್ದಿಯನ್ನ ಕೊಡಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಷೆ ಯಲ್ಲಿ ಪ್ರಬುದ್ಧತೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಎಂ.ಸಿ.ಜೆ. ವಿಭಾಗದ ಅಧ್ಯಕ್ಷ ಎಂ.ಪಿ. ಉಮೇಶ್ಚಂದ್ರ ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿ, ಬಾಸೆಲ್ ಮಿಷನರಿಗಳು ಕ್ರೈಸ್ತ ಮಿಷನರಿಗಳು ಮಂಗಳೂರಿಗೆ ಬರಲಾಗಿ ಇಲ್ಲಿ ಕೈಗಾರಿಗೆ, ಮುದ್ರಣ, ಬಂದರು, ಶಿಕ್ಷಣ, ಆರೋಗ್ಯ, ಕೃಷಿ ಮತ್ತು ವ್ಯಾಪಾರ ಸೇರಿದಂತೆ ಹಲವು ಕ್ಷೇತ್ರಗಳು ಬೆಳೆದು ನಿಂತಿವೆ ಎಂದ ಅವರು ಕರ್ನಾಟಕದ ಪತ್ರಿಕೋದ್ಯಮ ಇತಿಹಾಸದಲ್ಲಿ ಕ್ರೈಸ್ತ ಮಿಷನರಿಗಳ ಕೊಡುಗೆಗಳನ್ನು ವಿವರಿಸಿದರು.ಕರ್ನಾಟಕದ ಏಕೀಕರಣದ ಕಲ್ಪನೆಯನ್ನು ಮೊತ್ತ ಮೊದಲಿಗೆ ಮುಂದಿಟ್ಟವರು  ಹರ್ಮನ್ ಮೊಗ್ಲಿಂಗ್ ಎಂದರು. 

ವಿಭಾಗದ ಉಪನ್ಯಾಸಕ ಮಂಜಪ್ಪ ಧ್ಯಾಮಪ್ಪ ಗೋಣಿ ಮಂಗಳೂರ ಸಮಾಚಾರ ಪತ್ರಿಕೆಯ ಕಿರು ಪರಿಚಯಿಸಿದರು. ಉಪನ್ಯಾಸಕ ವಿಷ್ಣುಧರನ್ ವಂದಿಸಿದರು. ಎಂ.ಸಿ.ಜೆ ವಿದ್ಯಾರ್ಥಿನಿ ನಿರೀಕ್ಷಾ ಬಿ.ಎನ್. ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article