
ಗಂಗೊಳ್ಳಿ: ಸಮುದ್ರದಲ್ಲಿ ಟ್ರಾಲ್ ಬೋಟ್ ಮಗುಚಿ ಮೂವರು ನಾಪತ್ತೆ, ಓರ್ವ ಪಾರು
Tuesday, July 15, 2025
ಕುಂದಾಪುರ: ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ದೋಣಿಯೊಂದು ಭಾರೀ ಗಾಳಿ-ಮಳೆಗೆ ಮುಳುಗಿ ಮೂವರು ಮೀನುಗಾರರು ನಾಪತ್ತೆಯಾಗಿರುವ ಘಟನೆ ಗಂಗೊಳ್ಳಿಯ ಲೈಟ್ ಹೌಸ್ ಬಳಿ ಮಂಗಳವಾರ ಸಂಭವಿಸಿದೆ.
ನಾಪತ್ತೆಯಾದವರನ್ನು ರೋಹಿತ್ ಖಾರ್ವಿ (38), ಸುರೇಶ ಖಾರ್ವಿ (45) ಜಗನ್ನಾಥ್ ಖಾರ್ವಿ(43) ಎಂದು ಗುರುತಿಸಲಾಗಿದೆ. ಇವರ ಜೊತೆಗಿದ್ದ ಇನ್ನೋರ್ವ ಮೀನುಗಾರ ಸಂತೋಷ್ ಖಾರ್ವಿ (35) ಪಾರಾಗಿದ್ದಾರೆ.
ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಗಾಳಿಯ ರಭಸವೂ ಬಲವಾಗಿದೆ. ಸಮುದ್ರದಲ್ಲಿ ಕಡಲ ಅಬ್ಬರ ಜೋರಾಗಿದೆ. ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಟ್ರಾಲ್ ದೋಣಿ ಸಮುದ್ರದ ಅಲೆಗೆ ಸಿಲುಕಿ, ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ನಾಲ್ಕು ಮಂದಿ ಸಮುದ್ರ ಪಾಲಾಗಿದ್ದರು. ಈ ವೇಳೆ ಓರ್ವ ಸಂತೋಷ ಖಾರ್ವಿ ಈಜಿ ದಡ ಸೇರಿದ್ದಾರೆ.
ನಾಪತ್ತೆಯಾಗಿರುವ ಮೂವರು ಮೀನುಗಾರರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು ಕರಾವಳಿ ಕಾವಲು ಪಡೆ, ಗಂಗೊಳ್ಳಿ ಠಾಣೆ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ, ಸ್ಥಳೀಯ ಮೀನುಗಾರರು ಹುಡುಕಾಟ ನಡೆಸುತ್ತಿದ್ದಾರೆ.