ಧ.ಗ್ರಾ. ಯೋಜನೆಯಿಂದ ಪರಿಸರ ಸಂರಕ್ಷಣಾ ಮಾಹಿತಿ: ಹಣ್ಣಿನ ಗಿಡ ನಾಟಿ

ಧ.ಗ್ರಾ. ಯೋಜನೆಯಿಂದ ಪರಿಸರ ಸಂರಕ್ಷಣಾ ಮಾಹಿತಿ: ಹಣ್ಣಿನ ಗಿಡ ನಾಟಿ


ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕುಂದಾಪುರ-2 ಯೋಜನಾ ಕಚೇರಿ ವ್ಯಾಪ್ತಿಯ ಅಮಾಸೆಬೈಲು ವಲಯದ ಜಡ್ಡಿನಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮವನ್ನು ನಡೆಸಲಾಯಿತು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳು ದೇಶದ ಆಸ್ತಿ. ಮಕ್ಕಳಿಗೆ ಉತ್ತಮ ಪರಿಸರದ ಬಗ್ಗೆ ಮಾಹಿತಿ ನೀಡಬೇಕು. ಇಂದು ಆಹಾರ ಪದ್ಧತಿ ಸರಿ ಇಲ್ಲ, ಪರಿಶುದ್ಧವಾದ ಆಹಾರ ಸಿಗುತ್ತಿಲ್ಲ. ಪರಿಸರವನ್ನು ಹಾಳು ಮಾಡದೆ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯವಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದೆ. ಕೃಷಿ, ಆರೋಗ್ಯ, ಮಾಸಾಶನ, ಶಿಕ್ಷಣ ಕ್ಷೇತ್ರಗಳಲ್ಲಿ ಹಲವಾರು ಸಾಮಾಜಿಕ ಉಪಯುಕ್ತ ಕೆಲಸಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ. ಪರಿಸರ ಸಂರಕ್ಷಣೆಯೂ ಅವುಗಳಲ್ಲೊಂದು ಎಂದು ಹೇಳಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ ಮಾತನಾಡಿ, ಶುದ್ಧ ಗಾಳಿ, ಶುದ್ಧವಾದ ಆಹಾರ ನಮಗೆ ಬೇಕಾಗಿದೆ. ಸ್ವಚ್ಛ ಸುಂದರ ವಾತಾವರಣವನ್ನು ಸೃಷ್ಟಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಶಾಲೆಯಲ್ಲಿ ಹಣ್ಣಿನ ಗಿಡಗಳನ್ನು ನೆಡುವುದು ಉತ್ತಮವಾದ ಕೆಲಸ. ಈ ನಿಟ್ಟಿನಲ್ಲಿ ಧರ್ಮಸ್ಥಳ ಯೋಜನೆಯವರು ನಮ್ಮ ಶಾಲೆಯನ್ನು ಆಯ್ಕೆ ಮಾಡಿಕೊಂಡ ಬಗ್ಗೆ ಕೃತಜ್ಞತೆಗಳು ಎಂದರು. 

ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಸದಾಶಿವ ಶೆಟ್ಟಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ್ ಹೆಗ್ಡೆ ವಹಿಸಿದ್ದರು. ಕೃಷಿ ಮೇಲ್ವಿಚಾರಕ ಪ್ರದೀಪ್ ಕುಮಾರ್ ಪ್ರಸ್ತಾವಿಕ ಮಾತನಾಡಿದರು. 

ಪ್ರಗತಿ ಬಂಧು ಒಕ್ಕೂಟದ ಉಪಾಧ್ಯಕ್ಷೆ ಇಂದಿರಾ, ಶಿಕ್ಷಕ ನಾಗರಾಜ್ ಉಪಸ್ಥಿತರಿದ್ದರು.

ಸೇವಾ ಪ್ರತಿನಿಧಿ ಶಂಕರ್ ಸ್ವಾಗತಿಸಿ, ಕೃಷಿ ಮೇಲ್ವಿಚಾರಕ ಪ್ರದೀಪ್ ಕುಮಾರ್ ವಂದಿಸಿದರು. ವಲಯದ ಮೇಲ್ವಿಚಾರಕ ಸಂದೀಪ್ ಕಾರ್ಯಕ್ರಮ ನಿರೂಪಿಸಿದರು.

ಶಾಲೆಯ ಅಧ್ಯಾಪಕ ವೃಂದ, ಪ್ರಗತಿ ಬಂದು ಸ್ವಸಹಾಯ ಸಂಘದ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲಾ ಆವರಣದಲ್ಲಿ ವಿವಿಧ ನಮೂನೆಯ ಹಣ್ಣಿನ ಗಿಡಗಳನ್ನು ನೆಡಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article