
ಕೆಂಪು ಕಲ್ಲು, ಮರಳು ಸಮಸ್ಯೆ ಪರಿಹರಿಸುವಲ್ಲಿ ಕೈ ಸರಕಾರ ವಿಫಲ: ಪ್ರತಿಭಟನೆ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೆಂಪುಕಲ್ಲು ಹಾಗೂ ಮರಳು ಸಮಸ್ಯೆ ಪರಿಹರಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ವೈ-ಲ್ಯ ಖಂಡಿಸಿ ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ವತಿಯಿಂದ ನಗರದ ಮಿನಿ ವಿಧಾನಸೌಧ ಮುಂಭಾಗ ಸೋಮವಾರ ಪ್ರತಿಭಟನೆ ನಡೆಯಿತು.
ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಸ್ವಾತಂತ್ರ್ಯ ಬಂದ ಬಳಿಕ ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ಪೂರೈಕೆ ಸ್ಥಗಿತ ಆಗಿರಲಿಲ್ಲ. ಮನೆ, ಕಟ್ಟಡ ನಿರ್ಮಿಸಲು ರಾಜ್ಯದ ಕಾಂಗ್ರೆಸ್ ಸರಕಾರ ಕೆಂಪುಕಲ್ಲು ಸಿಗದಂತೆ ಮಾಡಿದೆ. ಇದರಿಂದ ಕಾರ್ಮಿಕರು ಕಣ್ಣೀರು ಹಾಕುತ್ತಿದ್ದಾರೆ. ಮರಳು, ಕೆಂಪುಕಲ್ಲು ಸಮಸ್ಯೆ ಬಗೆಹರಿಸಲು ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಇದುವರೆಗೆ ಒಂದೇ ಒಂದು ಸಭೆ ನಡೆಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರಾವಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೊಳಿಸುವುದಾಗಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ, ಎರಡು ವರ್ಷವಾದರೂ ಮರಳು ನೀತಿ ಜಾರಿಗೊಂಡಿಲ್ಲ. ಸಿಆರ್‌ಜೆಡ್ ವಲಯದಲ್ಲಿ ಮರಳುಗಾರಿಕೆ ನಡೆಯುತ್ತಿಲ್ಲ. ಅಕ್ರಮ ಮರಳುಗಾರಿಕೆ ನಡೆಯತ್ತಿದ್ದು, ಕಾಂಗ್ರೆಸ್ ಪಕ್ಷದ ನಾಯಕರ ಹಿಂಬದಿಯಲ್ಲಿ ನಿಲ್ಲುವವರು ಇದರಲ್ಲಿ ಶಾಮೀಲಾಗಿದ್ದಾರೆ. ಕೇರಳದಿಂದ ಕಡಿಮೆ ಬೆಲೆಗೆ ಜಿಲ್ಲೆಗೆ ಕೆಂಪುಕಲ್ಲು ಪೂರೈಕೆಯಾಗುತ್ತಿದೆ. ಅಕ್ರಮ ಮರಳುಗಾರಿಕೆ ಮೂಲಕ ಕಾಂಗ್ರೆಸಿಗರು ಹಣ ಸಂಪಾದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೆಂಪುಕಲ್ಲು, ಮರಳು ಪೂರೈಕೆ ಸ್ಥಗಿತದಿಂದ ನಿರ್ಮಾಣ ಕ್ಷೇತ್ರದ ಕಾರ್ಮಿಕರು ಕೆಲಸ ಇಲ್ಲದೆ ಊಟಕ್ಕೆ ಪರದಾಡುತ್ತಿದ್ದಾರೆ. ಸಿಮೆಂಟ್ ವ್ಯಾಪಾರಿಗಳು, ಜಲ್ಲಿಕಲ್ಲು, ಗಾರೆ, ಪೈಂಟಿಂಗ್, ಇಲೆಕ್ಟ್ರಿಕ್ ಕೆಲಸ ಮಾಡುವವರಿಗೆ ಕೆಲಸ ಇಲ್ಲದಾಗಿದೆ. ಈ ಬಗ್ಗೆ ಕಾರ್ಮಿಕರು ನನ್ನ ಬಳಿ ಸಮಸ್ಯೆ ಹೇಳಿಕೊಂಡರು. ಆಡಳಿತ ಪಕ್ಷದ ಶಾಸಕರ ಬಳಿ ಹೇಳುವಂತೆ ನಾನು ವಿನಂತಿಸಿದೆ. ಕಾಂಗ್ರೆಸ್ ಶಾಸಕರ ಬಳಿ ಹೇಳಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅಳಲು ತೊಡಿಕೊಂಡರು ಎಂದು ಕಾಮತ್ ಹೇಳಿದರು.
ಎರಡು ವರ್ಷಗಳಿಂದ ಪರಿಹಾರ ಕಾಣದ ಮರಳು, ಕೆಂಪುಕಲ್ಲು ಸಮಸ್ಯೆಯನ್ನು ವಾರದೊಳಗೆ ಪರಿಹಾರ ಮಾಡುತ್ತೇವೆ ಎಂದು ರಾಜ್ಯ ಸರಕಾರ ಹೇಳಿದೆ. ಆದರೆ, ಇದುವರೆಗೆ ಪರಿಹಾರ ದೊರೆತಿಲ್ಲ. ಗಣಿ ಇಲಾಖೆಯಲ್ಲಿ ಅಽಕಾರಗಳೇ ಇಲ್ಲ. ಹಿರಿಯ ಭೂ ವಿಜ್ಞಾನಿ ಪ್ರಭಾರದಲ್ಲಿದ್ದಾರೆ. ಹಣ ನೀಡಿ ಹುದ್ದೆ ಪಡೆದುಕೊಂಡ ಅಽಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಜನರು ಬೀದಿಗೆ ಬಂದು ಛೀಮಾರಿ ಹಾಕುವ ಮುನ್ನ ರಾಜ್ಯ ಕಾಂಗ್ರೆಸ್ ಸರಕಾರ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಜಿಲ್ಲೆಯಲ್ಲಿ ಮರಳು ಹಾಗೂ ಕೆಂಪುಕಲ್ಲು ಪೂರೈಕೆ ಸ್ಥಗಿತದಿಂದ ಕಾರ್ಮಿಕರು ಬೀದಿಪಾಲಾಗಿದ್ದಾರೆ. ಮನೆ, ಕಟ್ಟಡ ನಿರ್ಮಾಣ, ಕಲ್ಲು ಕೋರೆಯವರು, ಸಣ್ಣ ಹೋಟೆಲ್ ನಡೆಸುವವರು ತೊಂದರೆಗೆ ಒಳಗಾಗಿದ್ದಾರೆ. ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಶಾಲಾ ಶುಲ್ಕ ಪಾವತಿಸಲು ಹಣವಿಲ್ಲದೆ ಪರದಾಡುತ್ತಿದ್ದಾರೆ. ಸಮಸ್ಯೆ ಬಗೆಹರಿಸಬೇಕಾದ ಉಸ್ತುವಾರಿ ಸಚಿವರು ಸುಮ್ಮನಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ಯೆಗಳಿಗೆ ರಾಜ್ಯ ಕಾಂಗ್ರೆಸ್ ಸರಕಾರ ಸ್ಪಂದಿಸುತ್ತಿಲ್ಲ. ಜಿಲ್ಲೆಯನ್ನು ರಾಜ್ಯ ಸರಕಾರ ನಿರ್ಲಕ್ಷ್ಯಿಸುತ್ತಿದೆ. ಜಿಲ್ಲೆಯಲ್ಲಿ ಮಾಜಿ ಸಚಿವ ರಮಾನಾಥ ರೈ ಹಾಗೂ ಸ್ಪೀಕರ್ ಆಗಿದ್ದರೂ ರಾಜಕಾರಣ ಮಾಡುತ್ತಿರುವ ಯು.ಟಿ. ಖಾದರ್ ಇವರಿಬ್ಬರ ಬಣದ ನಡುವಿನ ತಿಕ್ಕಾಟದಿಂದ ಜಿಲ್ಲೆಯ ಅಭಿವೃದ್ಧಿ ಸ್ಥಗಿತವಾಗಿದೆ. ಮರಳು, ಕೆಂಪುಕಲ್ಲು ಸಮಸ್ಯೆ ಬಗೆಹರಿಸಬೇಕಾದ ಗಣಿ ಸಚಿವರು ಜಿಲ್ಲೆಗೆ ಬಂದಿಲ್ಲ. ಅವರು ಬೆಂಗಳೂರಿಗೂ ಬರುತ್ತಿಲ್ಲ ಎಂದು ಆಪಾದಿಸಿದರು.
ಒಂದು ಟನ್ ಕೆಂಪುಕಲ್ಲಿಗೆ ಕೇರಳದಲ್ಲಿ 32 ರೂ. ರಾಯಲ್ಟಿ ಇದ್ದರೆ, ರಾಜ್ಯದಲ್ಲಿ 282 ರೂ. ಇದೆ. ಕೆಂಪುಕಲ್ಲು ಪರವಾನಿಗೆಗೆ ಅರ್ಜಿ ಸಲ್ಲಿಸಿದರೆ 21 ದಿನದೊಳಗೆ ಇತ್ಯರ್ಥವಾಗುವ ಬದಲಿಗೆ 8-10 ತಿಂಗಳು ವಿಳಂಬಿಸಲಾಗುತ್ತಿದೆ. ಸಮಸ್ಯೆ ಪರಿಹರಿಸದಿದ್ದರೆ ಬಿಜೆಪಿ ಇನ್ನಷ್ಟು ಪ್ರಬಲ ಹೋರಾಟ ನಡೆಸಲಿದೆ. ಕಾರ್ಮಿಕರ ಜತೆ ಬಿಜೆಪಿ ಇರಲಿದೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಮಾಜಿ ಮೇಯರ್‌ಗಳಾದ ದಿವಾಕರ ಪಾಂಡೇಶ್ವರ, ಸುಽರ್ ಶೆಟ್ಟಿ ಕಣ್ಣೂರು, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ವಿಜಯಕುಮಾರ್ ಶೆಟ್ಟಿ ಭಾಗವಹಿಸಿದ್ದರು. ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.