ದ.ಕ. ಜಿಲ್ಲಾ ಕಾಂಗ್ರೆಸ್-ಅಧಿಕಾರ ವಿಭಜನೆ ಚಿಂತನೆ: ಎಂ.ಸಿ. ವೇಣುಗೋಪಾಲ್

ದ.ಕ. ಜಿಲ್ಲಾ ಕಾಂಗ್ರೆಸ್-ಅಧಿಕಾರ ವಿಭಜನೆ ಚಿಂತನೆ: ಎಂ.ಸಿ. ವೇಣುಗೋಪಾಲ್


ಮಂಗಳೂರು: ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕವನ್ನು ಎಐಸಿಸಿ ನಿರ್ದೇಶನದ ಮೇರೆಗೆ ಮಂಗಳೂರು ನಗರ ಹಾಗೂ ಮಂಗಳೂರು ಗ್ರಾಮಾಂತರವಾಗಿ ಎರಡು ಘಟಕಗಳಾಗಿ ವಿಭಜಿಸಲಾಗಿದ್ದು, ಅದರಂತೆ ಜಿಲ್ಲಾ ಕಾಂಗ್ರೆಸ್‌ನ ಅಧಿಕಾರ ವಿಭಜನೆಯೂ ಚಿಂತನೆಯಲ್ಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಸ್ತುವಾರಿ ಎಂ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಕೆಪಿಸಿಸಿ ಹಾಗೂ ಎಐಐಸಿಯಿಂದ ತೀರ್ಮಾನ ಇನ್ನಷ್ಟೇ ಆಗಬೇಕಾಗಿದೆ ಎಂದರು. 

ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸುವ ಬಿಜೆಪಿಗರಿಗೆ ಈ ಯೋಜನೆಗಳು ಯಾರಿಗೂ ತಲುಪಿಲ್ಲ ಅಥವಾ ಯೋಜನೆಗಳು ಸುಳ್ಳು ಎಂದು ಹೇಳಲು ಸಾಧ್ಯ ಇಲ್ಲ. ಪಕ್ಷ, ಜಾತಿ, ಸಮುದಾಯ ಭೇದವಿಲ್ಲದೆ ಎಲ್ಲರಿಗೂ ಈ ಯೋಜನೆಗಳು ತಲುಪಿವೆ. ಇದಕ್ಕೆ ಯೋಜನೆಗಳನ್ನು ಪಡೆದ ಫಲಾನುಭವಿಗಳು ಖರ್ಚು ಮಾಡಿದ ಮೊತ್ತವೂ ಸಾಕ್ಷಿಯಾಗಿದೆ ಎಂದವರು ಹೇಳಿದರು. 

ಕಡಬ ಪಟ್ಟಣ ಪಂಚಾಯತ್ ಚುನಾವಣೆಗೆ ಸಂಬಂಧಿಸಿ ನಾಮಪತ್ರ ಸಲ್ಲಿಕೆ ಆಗಸ್ಟ್ 5ರಂದು ನಡೆಯಲಿದೆ. 13 ವಾರ್ಡ್ ಗಳ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಪೂರ್ವಭಾವಿ ಸಭೆ, ಚರ್ಚೆ ನಡೆಸಲಾಗಿದೆ. ಈ ಗೆಲುವಿನ ಮೂಲಕ ಮುಂದಿನ ತಾಪಂ., ಜಿಪಂ ಹಾಗೂ ಮನಪಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಯಾವ ರೀತಿಯ ಕಾರ್ಯಕ್ರಮ ರೂಪಿಸಬೇಕೆಂಬ ಬಗ್ಗೆ ಚರ್ಚೆ ನಡೆಯಲಿದೆ ಎಂದರು. 

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ನಿರಂತರವಾಗಿ ಅಧಿಕಾರಿಗಳ, ಜಿಲ್ಲಾ ನಾಯಕರ ಜತೆ ಸಂಪರ್ಕ ಇರಿಸಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಖುದ್ದು ಆರೋಗ್ಯ ಸಚಿವರೂ ಆಗಿರುವ ಅವರು, ಮಳೆಗಾಲದಲ್ಲಿ ಜಿಲ್ಲೆಯನ್ನು ಕಾಡುವ ರೋಗಗಳ ಬಗ್ಗೆ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಧರ್ಮಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸಿ ಅಶಾಂತಿಗೆ ಕಾರಣವಾಗಿದ್ದ ಪರಿಸ್ಥಿತಿಯನ್ನು ನಿಯಂತ್ರಿಸಲು ಸೌಹಾರ್ದ ಸಭೆ ನಡೆಸಲಾಗಿದೆ. ಕೋಮುಗಲಭೆಗೆ ಪ್ರಯತ್ನಿಸುವ ಯಾವುದೇ ಪಕ್ಷ ಅಥವಾ ಯಾರೇ ಆಗಲಿ ಕಠಿಣ ಕ್ರಮಕ್ಕೆ ಜಿಲ್ಲೆಗೆ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಅಧಿಕಾರಿಗಳು ಕ್ರಮ ವಹಿಸಿದ್ದಾರೆ. ಅವರ ಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು. 

ಪಕ್ಷದ ಎಸ್‌ಸಿ ಎಸ್‌ಟಿ ಘಟಕದ ಸಭೆ ಇಂದು ನಡೆಸಲಾಗಿದೆ. ಈ ಮೂಲಕ ವಿವಿಧ ವಿಭಾಗಗಳ ಸಭೆ ನಡೆಸಿ ಪಕ್ಷ ಸಂಘಟನೆಗೆ ಪ್ರಯತ್ನಿಸಲಾಗುವುದು ಎಂದರು. 

ಒಂದೇ ನಾಣ್ಯದ ಎರಡು ಮುಖಗಳು..:

ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು. ಇವರಿಬ್ಬರೂ ಜನಸಾಮಾನ್ಯರ ಜೊತೆ ಒಡನಾಟ ಇರಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ರಾಜಕೀಯದಲ್ಲಿ ಅವಕಾಶಕ್ಕಾಗಿ ಎಲ್ಲರಿಗೂ ಆಸೆ ಇರುತ್ತದೆ. ರಾಜಣ್ಣ ಅವರಾಗಲಿ, ಸತೀಶ್ ಜಾರಕಿಹೊಳೆಯವರಾಗಲಿ ಸಿಎಂ ಬದಲಾವಣೆ ಎಂಬ ಹೇಳಿಕೆ ನೀಡಿಲ್ಲ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಾ ಐದು ವರ್ಷಗಳ ಕಾಲ ನಾನು ಮುಖ್ಯಮಂತ್ರಿಯಾಗಿರಲಿದ್ದೇನೆ. ಆದರೆ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ. ಹಾಗಾಗಿ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಬಿಜೆಪಿಯವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಹಿಳಾ ಘಟಕ ನಗರ ವಿಭಾಗದ ಅಧ್ಯಕ್ಷೆ ಅಪ್ಪಿ, ಗ್ರಾಮಾಂತರ ವಿಭಾಗದ ಅಧ್ಯಕ್ಷೆ ಉಷಾ ಅಂಚನ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮುಖಂಡರಾದ ನವೀನ್ ಡಿಸೋಜ, ಮನುರಾಜ್, ದಿನೇಶ್, ಪ್ರೇಮ್ ಬಳ್ಳಾಲ್‌ಬಾಗ್, ನಜೀರ್ ಬಜಾಲ್ ಜಗನ್ನಾಥ್ ಮೊದಲಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article