
ಇಂದು ಮಂಗಳೂರು ನಗರದಾದ್ಯಂತ ಟ್ರಾಫಿಕ್ ಜಾಮ್..
ಮಂಗಳೂರು: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ-66 ರ ಕೂಳೂರು ಹಳೇ ಸೇತುವೆಯ ಬಳಿಯ ಕೆ.ಐ.ಓ.ಸಿ.ಎಲ್. ಜಂಕ್ಷನ್ನಿಂದ ಅಯ್ಯಪ್ಪ ಗುಡಿಯವರೆಗೆ ರಸ್ತೆ ದುರಸ್ತಿ ಕಾಮಗಾರಿ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಮಾಡಿರುವ ಮಾರ್ಪಾಡು ಬೈಕಂಪಾಡಿಯಿಂದ ನಂತೂರು ವರೆಗೆ ಭಾರೀ ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆ.
ಬೆಳಗ್ಗೆಯಿಂದಲೇ ಕೊಟ್ಟಾರ ಚೌಕಿ ಬಳಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಕಾಣಿಸಿಕೊಂಡಿದೆ. ಕಿಲೋ ಮೀಟರ್ ವರೆಗೆ ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿವೆ. ಈ ಕಡೆ ಕೆಪಿಟಿ, ನಂತೂರು, ಕೊಟ್ಟಾರದ ವರೆಗೆ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರೆ, ಸೇತುವೆಯಿಂದ ಮುಂದಕ್ಕೆ ಬೈಕಂಪಾಡಿಯನ್ನು ದಾಟಿ ವಾಹನಗಳು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿವೆ.
ಜು. 22ರ ರಾತ್ರಿ 8 ಗಂಟೆಯಿಂದ ಆರಂಭಗೊಂಡಂತೆ ಜು.25ರ ಬೆಳಗ್ಗೆ 8ರ ವರೆಗೆ ಕೂಳೂರು ಹಳೇ ಸೇತುವೆಯ ಬಳಿಯ ಕೆ.ಐ.ಓ.ಸಿ.ಎಲ್. ಜಂಕ್ಷನ್ನಿಂದ ಅಯ್ಯಪ್ಪ ಗುಡಿಯವರೆಗೆ ರಸ್ತೆ ದುರಸ್ತಿ ಕಾಮಗಾರಿ ನಡೆಯಲಿದೆ. ಈ ಅವಧಿಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಂಗಳವಾರ ಪ್ರಕಟನೆ ಹೊರಡಿಸಿದ್ದಾರೆ.
ಸಂಚಾರ ಬದಲಾವಣೆಯಂತೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುವ ಕೂಳೂರು ಹೊಸ ಸೇತುವೆಯಲ್ಲಿ ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಇದು ಆದರಿಂದ ಕೋಡಿಕಲ್ ಕ್ರಾಸ್‌ನಿಂದ ಕೆ.ಐ.ಓ.ಸಿ.ಎಲ್. ಜಂಕ್ಷನ್ ತನಕ ಹಾಗೂ ಪಣಂಬೂರು ಜಂಕ್ಷನ್‌ನಿಂದ ಕೆ.ಐ.ಓ.ಸಿ.ಎಲ್ ಜಂಕ್ಷನ್ ತನಕ ಭಾರೀ ಸಂಚಾರ ದಟ್ಟಣೆಗೆ ಕಾರಣವಾಗಿದೆ.
ಇಲ್ಲಿ ವಾಹನ ದಟ್ಟಣೆಯಾದಲ್ಲಿ ಬದಲಿ ಮಾರ್ಗವನ್ನು ಬಳಸುವಂತೆ ಈಗಾಗಲೇ ಸೂಚಿಸಿದ್ದಾರೆ. ಆದರೂ ಸಂಚಾರ ಬದಲಾವಣೆ ಭಾರೀ ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆ.