
ಮಳೆಗೆ ತಡೆಗೋಡೆ ಕುಸಿತ: ಶಾಸಕ ಕಾಮತ್ ಭೇಟಿ, ಪರಿಶೀಲನೆ
Friday, July 11, 2025
ಮಂಗಳೂರು: ನಗರದಲ್ಲೆಡೆ ಸುರಿದ ಮಳೆಗೆ ಶಕ್ತಿನಗರದ ಕ್ಯಾಸ್ಟೊಲಿನೋ ಕಾಲೊನಿ ಬಳಿ ಬೃಹತ್ ತಡೆಗೋಡೆಯೊಂದು ಕುಸಿದಿದ್ದು, ಸ್ಥಳಕ್ಕೆ ಶಾಸಕ ವೇದವ್ಯಾಸ ಕಾಮತ್ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಡೆಗೋಡೆ ಕುಸಿದ ರಭಸಕ್ಕೆ ಅಲ್ಲಿನ ಕಾಂಕ್ರೀಟ್ ರಸ್ತೆ, ಚರಂಡಿ, ಮ್ಯಾನ್ ಹೋಲ್ ಮತ್ತು ಬಾವಿಗೆ ತೀವ್ರ ಹಾನಿಯಾಗಿದೆ. ಅಲ್ಲದೇ ಸಮೀಪದ ಕೆಲವು ಮನೆಗಳ ಮೆಟ್ಟಿಲುಗಳವರೆಗೂ ತಡೆಗೋಡೆಯ ಅವಶೇಷಗಳು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಕೂಡಲೇ ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಎಲ್ಲಾ ಅವಶೇಷಗಳನ್ನು ತೆರವುಗೊಳಿಸಿ, ಹಾನಿಗೊಳಗಾಗಿರುವ ರಸ್ತೆ, ಚರಂಡಿ ಮೊದಲಾದವುಗಳ ಮರು ನಿರ್ಮಾಣದ ಬಗ್ಗೆ ಕ್ರಮವಹಿಸಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯರಾದ ಕಿಶೋರ್ ಕೊಟ್ಟಾರಿ, ಶೈಲೇಶ್ ಶೆಟ್ಟಿ, ಸ್ಥಳೀಯ ಪ್ರಮುಖರಾದ ವಿನಯ್, ಚನ್ನು, ರಮೇಶ್, ಸೇರಿದಂತೆ ಪಾಲಿಕೆಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಮೆಸ್ಕಾಂ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.