
ಹಣಕ್ಕೆ ಒತ್ತಾಯ: ವಿಚಾರಣಾಧೀನ ಕೈದಿಗೆ ಹಲ್ಲೆ
Monday, July 14, 2025
ಮಂಗಳೂರು: ವಿಚಾರಣಾಧೀನ ಕೈದಿಗೆ ಇತರ ವಿಚಾರಣಾಧೀನ ನಾಲ್ಕು ಮಂದಿ ಕೈದಿಗಳು ಹಲ್ಲೆ ನಡೆಸಿ ಹಣ ಕೊಡುವಂತೆ ಒತ್ತಾಯಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಉಳ್ಳಾಲ ಠಾಣಾ ವ್ಯಾಪ್ತಿಗೆ ಸಂಬಂಧಿಸಿದ ಪ್ರಕರಣದ ಆರೋಪಿ ಮಿಥುನ್‌ಗೆ ಕೈದಿಗಳಾದ ಧನುಷ್ ಭಂಡಾರಿ, ಸಚಿನ್ ತಲಪಾಡಿ, ದಿಲೇಶ್, ಲಾಯಿ ವೇಗಸ್ ಎಂಬವರು ಜು.9ರಂದು ಸಂಜೆ 5ಕ್ಕೆ ಜೈಲು ಸಿಬ್ಬಂದಿಯ ಕಣ್ತಪ್ಪಿಸಿ ಹಲ್ಲೆ ನಡೆಸಿ 50 ಸಾವಿರ ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಇದನ್ನು ಜೈಲು ಅಧಿಕಾರಿಗಳಿಗೆ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಪ್ರಾಣಭಯದಿಂದ ಮಿಥುನ್ ದೂರು ನೀಡದೆ, ಹಲ್ಲೆ ನಡೆಸಿರುವ ಕೈದಿ ಸಚಿನ್ ಕೊಟ್ಟ ಎರಡು ಮೊಬೈಲ್ ಸಂಖ್ಯೆಗೆ ಪತ್ನಿಯ ಮೂಲಕ 20 ಸಾವಿರ ರೂ. ಫೋನ್ ಪೇ ಮಾಡಿಸಿದ್ದಾನೆ.
ಸಹಾಯಕ ಪೊಲೀಸ್ ಆಯಕ್ತರು ಹಾಗೂ ಬರ್ಕೆ ಪೊಲೀಸ್ ಠಾಣೆಯ ನಿರೀಕ್ಷಕರು ಕಾರಾಗೃಹದ ತಪಾಸಣೆ ಮಾಡಲು ತೆರಳಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಜಿಲ್ಲಾ ಕಾರಾಗೃಹದ ಅಧೀಕ್ಷ ಶರಣಬಸಪ್ಪ ಶನಿವಾರ ನೀಡಿದ ದೂರಿನಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.