
ಅಕ್ರಮ ಮರಳುಗಾರಿಕೆ ನಿಷೇಧದಿಂದಾಗಿ ಕೆಲಸ ಕಳೆದುಕೊಂಡ ಕಟ್ಟಡ ಕಾರ್ಮಿಕರಿಗೆ ಪರಿಹಾರಧನ ಒದಗಿಸಲು ಒತ್ತಾಯಿಸಿ ಪ್ರತಿಭಟನೆ
ಮಂಗಳೂರು: ಅಕ್ರಮ ಮರಳುಗಾರಿಕೆ, ಕೆಂಪು ಕಲ್ಲು ಗಣಿಗಾರಿಕೆ ನಿಷೇಧದಿಂದಾಗಿ ಕೆಲಸ ಕಳೆದುಕೊಂಡ ಕಟ್ಟಡ ಕಾರ್ಮಿಕರಿಗೆ ಪರಿಹಾರ ಧನ ಒದಗಿಸಬೇಕು, ಪರಿಸರಸ್ನೇಹಿ ಮರಳುಗಾರಿಕೆ ಹಾಗೂ ನಿಯಮಬದ್ದ ಕೆಂಪು ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬೇಕು, ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮರಳು,ಕೆಂಪು ಕಲ್ಲು,ಜಲ್ಲಿ ಸಿಗುವಂತಾಗಲು ಆಗ್ರಹಿಸಿ ಇಂದು ನಗರದ ಕ್ಲಾಕ್ ಟವರ್ ಬಳಿಯಲ್ಲಿ ನೂರಾರು ಸಂಖ್ಯೆಯ ಕಟ್ಟಡ ಕಾರ್ಮಿಕರು ಪ್ರತಿಭಟನಾ ಪ್ರದರ್ಶನ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರುರವರು, ಜಿಲ್ಲೆಯ ಕೋಮು ರಾಜಕಾರಣವನ್ನು ನಿಯಂತ್ರಿಸಲು ವ್ಯಾಪಕ ಹಣದ ಹೊಳೆಯನ್ನು ಹರಿಸುವ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಲು ಅಕ್ರಮ ಮರಳುಗಾರಿಕೆಯನ್ನು ನಿಷೇಧ ಮಾಡಿರುವ ಪೋಲಿಸ್ ಇಲಾಖೆ ಜಿಲ್ಲಾಡಳಿತದ ಕ್ರಮ ನಿಜಕ್ಕೂ ಶ್ಲಾಘನೀಯ. ಆದರೆ ಅದರ ಜೊತೆಗೆ ಮರಳು ಹಾಗೂ ಕೆಂಪು ಕಲ್ಲಿನ ವಿಪರೀತ ದರದಿಂದಾಗಿ ಜನಸಾಮಾನ್ಯರು ಕಂಗಾಲಾಗಿದ್ದಾರೆ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ವಿಪರೀತ ಹೊಡೆತ ಬಿದ್ದಿದ್ದು ಕಾರ್ಮಿಕರು ಕೆಲಸ ಕಳೆದುಕೊಂಡು ಬದುಕು ದುಸ್ತರಗೊಂಡಿದೆ ಎಂದು ಹೇಳಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ವಸಂತ ಆಚಾರಿ ಅವರು ಮಾತನಾಡುತ್ತಾ, ಕರಾವಳಿ ಪ್ರದೇಶದಲ್ಲಿ ಉಧ್ಭವಗೊಂಡ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ರಾಜ್ಯ ಕೇಂದ್ರ ಸರಕಾರಗಳು ಕೂಡಲೇ ಗಮನ ಹರಿಸಬೇಕೆಂದು ಆಗ್ರಹಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘಟನೆಯ ಜಿಲ್ಲಾ ನಾಯಕರಾದ ರವಿಚಂದ್ರ ಕೊಂಚಾಡಿಯವರು ಕೈಗೆಟಕುವ ದರದಲ್ಲಿ ಮರಳು ಕೆಂಪು ಕಲ್ಲು ಹಾಗೂ ಜೆಲ್ಲಿ ಸಿಗುವಂತಾಗಲು ಜಿಲ್ಲಾಡಳಿತ ಮಧ್ಯೆಪ್ರವೇಶಿಸಬೇಕು ಆ ಮೂಲಕ ಸಂಕಷ್ಟಕ್ಕೊಳಗಾದ ಜಿಲ್ಲೆಯ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಬೇಕೆಂದು ಹೇಳಿದರು
CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು ಮಾತನಾಡಿ, ಜಿಲ್ಲೆಯ ಅಕ್ರಮ ಮರಳುಗಾರಿಕೆ ಸೇರಿದಂತೆ ಅಕ್ರಮ ದಂಧೆಗಳಿಗೆ ಅಡಿಪಾಯ ಹಾಕಿರುವ ಬಿಜೆಪಿ ಕಾಂಗ್ರೆಸ್, ಆ ಮೂಲಕ ಎಲ್ಲಾ ಅಕ್ರಮಗಳಲ್ಲಿ ಒಂದಾಗಿ ನಿಂತು ಜಿಲ್ಲೆಯ ಸೌಹಾರ್ದತೆಯನ್ನೇ ಬಲಿಕೊಟ್ಟಿದ್ದಾರೆ ಎಂದು ಹೇಳಿದರು.
ಪ್ರಾರಂಭದಲ್ಲಿ ಕಟ್ಟಡ ಕಾರ್ಮಿಕರು ನಗರದ ಅಂಬೇಡ್ಕರ್ ವ್ರತ್ತದಿಂದ ಮೆರವಣಿಗೆಯಲ್ಲಿ ಹೊರಟು ರಾಜ್ಯ ಸರಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ದ ಆಕ್ರೋಶಭರಿತರಾಗಿ ಘೊಷಣೆ ಕೂಗಿದರು
ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡರಾದ ದಿನೇಶ್ ಶೆಟ್ಟಿ, ಚಂದ್ರಹಾಸ ಪಿಲಾರ್, ಅಶೋಕ್ ಶ್ರೀಯಾನ್,ಲೋಕೇಶ್ ಎಂ,ಅಶೋಕ್ ಸಾಲಿಯಾನ್,ಜಯಶೀಲ ವಾಮಂಜೂರು, ರಿಚರ್ಡ್ ಕ್ರಾಸ್ತಾ, ದೀಪಕ್ ಬಜಾಲ್, DYFI ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ನವೀನ್ ಕೊಂಚಾಡಿ, ರಫೀಕ್ ಹರೇಕಳ, ಜಗದೀಶ್ ಬಜಾಲ್ ಮತ್ತಿತರರು ಭಾಗವಹಿಸಿದ್ದರು.