
ಪೂಜಾ ಕಾರ್ಯಕ್ರಮದ ವೇಳೆಯೇ ಮನೆ ಹರಾಜು: ಸೊಸೈಟಿಯವರ ರಾಜಕೀಯ ಎಂಬ ಆರೋಪ
ಕುಂದಾಪುರ: ಬ್ರಹ್ಮಾವರ ತಾಲೂಕು ಕೋಟತಟ್ಟು ಗ್ರಾಮದ ಬಾರಿಕೆರೆಯ ಮನೆಯೊಂದರಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಮನೆಯನ್ನು ಸೊಸೈಟಿಯವರು ಹರಾಜು ಹಾಕಿದ್ದಾಗಿ ಮನೆಯವರು ಆರೋಪಿಸಿದ್ದಾರೆ. ಮನೆಯ ಯಜಮಾನ ನಾಗೇಂದ್ರ ಪುತ್ರನ್ ಮಾಧ್ಯಮದವರೊಂದಿಗೆ ಅಳಲು ತೋಡಿಕೊಂಡಿದ್ದಾರೆ.
ಪ್ರಕರಣದ ವಿವರ:
ಬಾರಿಕೆರೆಯ ನಾಗೇಂದ್ರ ಪುತ್ರನ್, ತಂದೆ ಕೃಷ್ಣ ಬಂಗೇರ ಮತ್ತು ತಾಯಿ ಜಲಜಾ ಮರಕಾಲ್ತಿ ಅವರ ಕುಟುಂಬಕ್ಕೆ ಸೇರಿದ ಮನೆ ಇದಾಗಿದೆ. ಮನೆಯ ಜೊತೆಗೆ ಸುಮಾರು 45 ಸೆಂಟ್ಸ್‌ನಷ್ಟು ಜಾಗ ಇಲ್ಲಿತ್ತು. ಜು.14 ರಂದು ಬೆಳಗ್ಗೆ ಕುಟುಂಬದ ಮನೆಯಲ್ಲಿ ತುಳಸಿ ಪೂಜೆ ಮತ್ತು ಭಜನಾ ಕಾರ್ಯಕ್ರಮ ಆಯೋಜನೆಯಾಗಿತ್ತು.
ಈ ವೇಳೆ ಸ್ಥಳೀಯ ಸೊಸೈಟಿಯವರು ಮನೆಯನ್ನು ಹರಾಜು ಮಾಡಿದ್ದಾರೆ ಎಂಬುದು ಅವರ ಆರೋಪ.
ಈ ಮನೆಯು ಪಿತ್ರಾರ್ಜಿತ ಆಸ್ತಿಯಾಗಿದ್ದು, ಕುಟುಂಬದ ವ್ಯಕ್ತಿ ಜನರಲ್ ಪವರ್ ಆಫ್ ಆಟಾರ್ನಿ ಮೂಲಕ 2024ರಲ್ಲಿ ಸೊಸೈಟಿಯಿಂದ ಸಾಲ ಪಡೆಯುವಾಗ ಈ ಮನೆ ನಂಬರನ್ನು ನೀಡಿ ಪಿತ್ರಾರ್ಜಿತ ಆಸ್ತಿ ಪತ್ರವನ್ನು ಅಡವಿಟ್ಟು ಸೊಸೈಟಿಯಿಂದ 20 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ವಾಯ್ದೆಗೆ ಸರಿಯಾಗಿ ತೀರಿಸದೆ ಸುಸ್ತಿಯಾಗಿತ್ತು. ಪ್ರಕರಣ ಸಿವಿಲ್ ಕೋರ್ಟ್‌ಗೆ ಬಂದಿತ್ತು. ಇದೀಗ ಕೋರ್ಟ್ ಆದೇಶದಂತೆ ಅಮೀನರು ಸೊಸೈಟಿಯವರ ಸಮಕ್ಷಮ ಮನೆ ಹರಾಜು ನಡೆಸಿದ್ದರು. ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿ ಈ ವೇಳೆ ಪೊಲೀಸರ ದಂಡನ್ನೇ ಕರೆಸಿದ್ದರು!
ಜು.12 ರಂದು ಹರಾಜು ಪ್ರಕ್ರಿಯೆ ಇತ್ತು. ಆದರೆ ಅಂದು ಎರಡನೇ ಶನಿವಾರ ರಜೆ ಇದ್ದುದರಿಂದ ಮಾಡಿರಲಿಲ್ಲ. ಸೋಮವಾರ ಕೋರ್ಟ್ ಆದೇಶದಂತೆ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಆದರೆ ಅಂದೇ ಆ ಮನೆಯಲ್ಲಿ ಪೂಜಾ ಕಾರ್ಯಕ್ರಮವೂ ನಡೆಯುತ್ತಿದ್ದುದು ಕಾಕತಾಳೀಯ. ಸೊಸೈಟಿಯವರ ಕ್ರಮದ ಬಗ್ಗೆ ನಾವು ಕಾನೂನು ಹೋರಾಟ ನಡೆಸುತ್ತೇವೆ. ಇದರ ಹಿಂದೆ ರಾಜಕೀಯ ಮುಖಂಡರ ಹಿತಾಸಕ್ತಿಗಳಿವೆ ಎಂದು ನಾಗೇಂದ್ರ ಪುತ್ರನ್ ಆರೋಪಿಸಿದ್ದಾರೆ.
ಇದೇ ವೇಳೆ ಮಾಧ್ಯಮದವರ ಮುಂದೆ ಮನೆ ಹಿರಿಯರಾದ ಕೃಷ್ಣ ಬಂಗೇರ ಮಾತನಾಡಿ, ನಾವು ಬಹಳಷ್ಟು ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದೇವೆ. ಇವತ್ತು ಈ ರೀತಿ ನಮಗೆ ಸಮಸ್ಯೆಯಾಗಿದೆ. ನಾವಿನ್ನು ಎಲ್ಲಿಗೆ ಹೋಗುವುದು? ನಮಗೆ ಬೇರೆ ಜಾಗ ಇಲ್ಲ. ನಮಗೆ ಅನ್ಯಾಯ ಆಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ರಾಜಿ ಸಂಧಾನ ವಿಫಲ:
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸೊಸೈಟಿಯವರು, ತಾವು ಕಾನೂನು ಪ್ರಕಾರವಾಗಿಯೇ ಮುಂದುವರಿದಿದ್ದೇವೆ. ಕೋರ್ಟ್ ಆದೇಶದನ್ವಯ ಹರಾಜು ನಡೆಸಲಾಗಿದೆ ಎಂದಿದ್ದಾರೆ. 2014ರ ಸಾಲ ಬೆಳೆದು ಸುಮಾರು 60 ಲಕ್ಷವಾದಾಗ ಪಾರ್ಟಿಯನ್ನು ಕರೆಸಿ ಮಾತುಕತೆ ನಡೆಸಲಾಗಿದೆ. ಸುಮಾರು ಅರ್ಧದಷ್ಟು ಬಡ್ಡಿ ಮನ್ನಾ ಮಾಡಿ, ಅವರು ಸಾಲ ಚುಕ್ತಾ ಮಾಡಲು ಒಪ್ಪಿದ್ದಾರೆ. ಆಗ ಹತ್ತು ಲಕ್ಷ ರೂ. ಮುಂಗಡ ಕಟ್ಟಿ ಇನ್ನುಳಿದ ಮೊತ್ತ ಶೀಘ್ರ ತುಂಬಿಸಿ ಸಾಲ ಚುಕ್ತಾ ಮಾಡುವ ಒಪ್ಪಂದ ನಡೆದಿತ್ತು. ಆದರೆ ಸಾಲಗಾರರು ಮತ್ತೆ ಕೋರ್ಟಿನಲ್ಲಿ ವಾದಿಸಿ, ಆ ಮುಂಗಡ ಹಣವನ್ನೂ ವಾಪಾಸು ಪಡೆದಿದ್ದರು. ಎಲ್ಲವನ್ನೂ ಪರಾಮರ್ಷಿಸಿಯೇ ಇದೀಗ ಕೋರ್ಟ್ ಹರಾಜಿಗೆ ಆದೇಶಿಸಿದೆ. ಅದರನ್ವಯ ಪ್ರಕ್ರಿಯೆ ನಡೆದಿದೆಯೇ ಹೊರತು ಇದರಲ್ಲಿ ರಾಜಕೀಯ ಲೇಪನವಿಲ್ಲ ಎಂದು ಸೊಸೈಟಿಯವರು ಸ್ಪಷ್ಟಪಡಿಸಿದ್ದಾರೆ.