
ಅಜಿತ್‌ನನ್ನು 1 ಗಂಟೆ ಮೆರವಣಿಗೆ ಮಾಡುತ್ತೇವೆ: ತಾಕತ್ತಿದ್ದರೆ ತಡೆಯಲಿ ‘ಹಾಲಿ’ಗೆ ಮಾಜಿ ಸವಾಲು..!
ಪುತ್ತೂರು: ಪುತ್ತೂರಿನಲ್ಲಿ ಅಜಿತ್ ಮಡಿಕೇರಿ ಅವರನ್ನು ಒಂದು ಗಂಟೆ ಮೆರವಣಿಗೆ ಮಾಡುತ್ತೇವೆ. ಪುತ್ತೂರಿನ ಶಾಸಕರಿಗೆ ತಾಕತ್ತಿದ್ದರೆ ತಡೆಯಲಿ ಎಂದು ಹೇಳುವ ಮೂಲಕ ಶಾಸಕ ಅಶೋಕ್ ರೈ ಅವರಿಗೆ ಮಾಜಿ ಶಾಸಕ ಸಂಜೀವ ಮಠಂದೂರು ಸವಾಲು ಹಾಕಿದ್ದಾರೆ.
ಹಿಂದೂ ಜಾಗರಣಾ ವೇದಿಕೆಯ ಕಾರ್ಯಕ್ರಮವೊಂದರಲ್ಲಿ ಬಂದಿದ್ದ ಅಜಿತ್ ಮಡಿಕೇರಿ ಪುತ್ತೂರು ಶಾಸಕರನ್ನು ಅಯೋಗ್ಯ ಎಂದು ಸಂಬೋಧಿಸಿದ್ದರು. ಇದಕ್ಕೆ ಪ್ರತಿಕ್ರಯಿಸಿದ್ದ ಅಶೋಕ್ ರೈ ಅವರು ಯಾರನ್ನೇ ಆಗಲಿ ಏಕವಚನದಲ್ಲಿ ಸಂಬೋಧಿಸುವುದು ಸಂಸ್ಕೃತಿಯಲ್ಲ. ಎಲ್ಲಿಂದಲೋ ಬಂದ ಮುಠ್ಠಾಳ ಮಾತನಾಡಿ ಹೋಗಿದ್ದಾನೆ. ಆತ ಇನ್ನೂ ಸ್ವಲ್ಪ ಹೊತ್ತು ಪುತ್ತೂರಿನಲ್ಲಿ ಇರಬೇಕಿತ್ತು. ಆತನಿಗೆ ಬುದ್ದಿ ಕಲಿಸುವ ಕೆಲಸ ಮಾಡಲಾಗುತ್ತಿತ್ತು ಎಂದು ಹೇಳಿದ್ದರು.
ಇದಕ್ಕೆ ಪುತ್ತೂರಿನಲ್ಲಿ ಸೋಮವಾರ ನಡೆದ ಬಿಜೆಪಿ ಜನಾಕ್ರೋಶ ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕರು ತಿರುಗೇಟು ನೀಡಿದ್ದಾರೆ.
ಪುತ್ತೂರಿನ ಬಿಜೆಪಿ ಕಾರ್ಯಕರ್ತರು ‘ಬಳೆ’ ತೊಟ್ಟುಕೊಂಡು ರಾಜಕೀಯ ಮಾಡುವವರಲ್ಲ. ಅವರು ಸ್ವಾಭಿಮಾನಿಗಳು. ಯಾವುದಾದರೂ ಕೆಲಸಕ್ಕಾಗಿ ಶಾಸಕರ ಹತ್ತಿರ ಹೋದರೆ ಕಾಂಗ್ರೇಸ್ ಶಾಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಕೆಲಸ ಮಾಡಿಸಲು ಮನವಿ ನೀಡಲು ಹೋದಾಗಲೂ ಇದೇ ಪರಿಸ್ಥಿತಿ. ನಾನು ಶಾಸಕನಾಗಿದ್ದಾಗ ಕಾಂಗ್ರೇಸ್ ಹಾಗೂ ಇತರ ಪಕ್ಷದವರು ನನ್ನಲ್ಲಿಗೆ ಬರುತ್ತಿದ್ದರು. ಅವರಿಗೆ ಕೆಲಸವೂ ಮಾಡಿಕೊಟ್ಟಿದ್ದೇನೆ. ಆದರೆ ನಾನು ಯಾವತ್ತಿಗೂ ಅವರಿಗೆ ಬಿಜೆಪಿಶಾಲು ಹಾಕಲು ಹೋಗಿಲ್ಲ. ಈಗಿನ ಶಾಸಕರ ಗೋಮುಖ ಮಾತ್ರ ನೀವು ನೋಡಿದ್ದೀರಿ. ವ್ಯಾಘ್ರಮುಖ ನೋಡಿಲ್ಲ. ಪಿಸ್ತೂಲ್ ತೋರಿಸಿ ಹೆದರಿಸಿದವರು ಇಂದು ಅದೇ ಮುಖವನ್ನು ತೋರಿಸುವ ಪ್ರಯತ್ನದಲ್ಲಿದ್ದಾರೆ ಎಂದು ತೀಕ್ಷ್ಣವಾಗಿ ಪ್ರತಿಕ್ರಯಿಸಿದ್ದಾರೆ.