
ಕರಾವಳಿಯಲ್ಲಿಂದು ರೆಡ್ ಅಲರ್ಟ್: ವಾಯುಭಾರ ಕುಸಿತವು ಪ್ರಭಲಗೊಂಡಲ್ಲಿ ಮಳೆಯ ಪ್ರಮಾಣ ಹೆಚ್ಚಾ ಸಾಧ್ಯತೆ
ಮಂಗಳೂರು: ಮುಂದಿನ ಒಂದೆರಡು ದಿನ ಕರಾವಳಿಯಲ್ಲಿ ನೈರುತ್ಯ ಮುಂಗಾರು ಮಾರುತಗಳು ಪ್ರಬಲವಾಗುತ್ತಿದ್ದು, ಗುರುವಾರ ಹವಾಮಾನ ಇಲಾಖೆ ಮುನ್ಸೂಚನೆಯಂತೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಬುಧವಾರ ದ.ಕ ಜಿಲ್ಲೆಯಲ್ಲಿ ದಿನಪೂರ್ತಿ ಮಳೆಯಾಗಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ವಾಯುಭಾರ ಕುಸಿತ ಪರಿಣಾಮ ಕರಾವಳಿಯಾಧ್ಯಂತ ಮುಂದಿನ 2 ದಿನ ಇದೇ ರೀತಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಉತ್ತಮ ನಿರಂತರ ಮಳೆಯ ಮುನ್ಸೂಚೆನೆ ಇದೆ. ಈಗಿನಂತೆ ಜುಲೈ 26ರ ತನಕ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನಿರಂತರ ಉತ್ತಮ ಮಳೆ ಮುಂದುವರಿಯಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯ ಮಳೆ ಮುಂದುವರಿಯಲಿದೆ. 29ರ ನಂತರ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿವೆ ಎಂದು ಐಎಂಡಿ ಮಾಹಿತಿ ನೀಡಿದೆ.
ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆ:
ದ.ಕ ಜಿಲ್ಲೆಯ ಗ್ರಾಮಿಣ ಭಾಗದಲ್ಲಿ ಬುಧವಾರ ಉತ್ತಮ ಮಳೆಯಾಗಿದ್ದು, ಮುಂಜಾನೆಯಿಂದಲ್ಲೇ ನಿರಂತರವಾಗಿ ಹದವಾದ ಮಳೆ ಸುರಿದಿದೆ. ಕರಾವಳಿ ತೀರದಲ್ಲಿ ನಿನ್ನೆ ಭಾರಿ ಮಳೆಯಾಗಿತ್ತು. ಜಿಲ್ಲಾದ್ಯಂತ ರಾತ್ರಿಯಿಡೀ ನಿರಂತರ ಮಳೆಯಾಗಿದ್ದರೂ, ಮಂಗಳವಾರ ಮಳೆಯ ತೀವ್ರತೆ ಕೊಂಚ ಕಡಿಮೆ ಇದ್ದುದರಿಂದ ಆತಂಕದ ಪರಿಸ್ಥಿತಿ ಉದ್ಭವಿಸಿಲ್ಲ. ಮಂಗಳುರು ನಗರ ಸುತ್ತಮುತ್ತ ಬೆಳಗ್ಗೆ ಸಾಧಾರಣ ಬಿಸಿಲು ಬಳಿಕ ಮಧ್ಯಾಹ್ನ ನಂತರ ಮಳೆ ಆವರಿಸಿತ್ತು. ಸಧ್ಯಕ್ಕೆ ದ.ಕ ಜಿಲ್ಲೆಯ ನದಿಗಳೆಲ್ಲ ತುಂಬಿ ಹರಿಯುತ್ತಿವೆ. ಮಂಗಳೂರು ನಗರ ಭಾಗದ ಕೆಲವೊಂದು ಭಾಗದಲ್ಲಿ ಸಾಧಾರಣದಿಂದ ಉತ್ತಮ ಮಳೆಯಾದ ಕಾರಣದಿಂದ ರಸ್ತೆಗಳಲ್ಲಿ ಮಳೆಯ ನೀರು ಹರಿದು ವಾಹನ ಸವಾರರಿಗೆ ಅಡ್ಡಿಯಾಗಿತ್ತು. ಪಶ್ಚಿಮಘಟ್ಟದ ತಳಭಾಗಗಳಲ್ಲಿ ಬುಧವಾರ ಸಾಮಾನ್ಯ ಮಳೆಯಾಗಿದ್ದು, ಮುಂದಿನ ಒಂದಡೆರು ದಿನ ಮಳೆ ಹೆಚ್ಚಾಗುವ ಮುನ್ಸೂಚನೆ ಇದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಮೀನುಗಾರಿಕೆಗೆ ಎಚ್ಚರಿಕೆ:
ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಗರಿಷ್ಠ 30.9 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಬುಧವಾರ ವೇಳೆ ತುಸು ಇಳಿಕೆ ಸಾಧ್ಯತೆ ಇದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ತುಸು ಹೆಚ್ಚಳವಾಗಿರುವುದರಿಂದ ಕಡಲತೀರ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಜುಲೈ 23ರಿಂದ 26ರ ವರೆಗೆ ಅರಬ್ಬಿ ಸಮುದ್ರದಲ್ಲಿ ಮಳೆ ಮತ್ತು ಭಾರಿ ಗಾಳಿ ಬೀಸುವುದರಿಂದ ನಾಡದೋಣಿ ಮೀನುಗಾರರು ಸೇರಿದಂತೆ ಯಾರೂ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ವಾಯುಭಾರ ಕುಸಿತ:
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಈಗಿನಂತೆ ವಾಯುಭಾರ ಕುಸಿತದ ಪರಿಣಾಮದಿಂದ ಜುಲೈ 29ರ ತನಕ ಮಳೆ ಮುಂದುವರಿಯುವ ಲಕ್ಷಣಗಳಿವೆ. ಬಿಡುವಿನ ಅವಧಿ ಕಡಿಮೆ ಇದ್ದು, ನಿರಂತರ ಹನಿ ಮಳೆಯ ಸಾಧ್ಯತೆ ಇದೆ. ಬಂಗ್ಲಾದೇಶದ ಕರಾವಳಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮದಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ದೀರ್ಘ ಅವಧಿಯ ಸಮಾನ್ಯ ಮಳೆಯಾಗುತ್ತಿದೆ. ವಾಯುಭಾರ ಕುಸಿತವು ಪ್ರಭಲಗೊಂಡಲ್ಲಿ ಮಳೆಯ ಪ್ರಮಾಣವೂ ಹೆಚ್ಚಾಗುವ ಆತಂಕವಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ:
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಸಧ್ಯಕ್ಕೆ ನೈರುತ್ಯ ಮುಂಗಾರು ಮಾರುತಗಳು ಭಾಹ್ಯ ಪ್ರಭಾವದಿಂದ ಪ್ರಬಲವಾಗಿದ್ದು, ಮುಂದಿನ 2-3 ದಿನ ಕೇರಳ ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರೆಯಲಿದೆ. ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನ ಮಾಹಿತಿಯಂತೆ ಕಳೆದ 24 ಗಂಟೆಯಲ್ಲಿ ಬಿದ್ದ ಮಳೆಯಲ್ಲಿ 53.1 ಮಿ.ಮೀ ಮಂಗಳೂರಿನಲ್ಲೇ ಹೆಚ್ಚು ಮಳೆಯಾಗಿದೆ. ಬೆಳ್ತಂಗಡಿ 27, ಬಂಟ್ವಾಳ 35.3, ಪುತ್ತೂರು 32.7, ಸುಳ್ಯ 40.3, ಮೂಡುಬಿದರೆ 50.3, ಕಡಬ 25.7, ಮೂಲ್ಕಿ 26.8 ಮತ್ತು ಉಳ್ಳಾಲದಲ್ಲಿ 31.8 ಮಿಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 49.7ಮಿಮಿ. ಮಳೆಯಾಗಿದೆ.