‘ಶಿವದೂತಗುಳಿಗೆ’ಯ ಭೀಮಾರಾವ್ ಪಾತ್ರಧಾರಿ ಚಿ. ರಮೇಶ್ ಕಲ್ಲಡ್ಕ ಇನ್ನಿಲ್ಲ

‘ಶಿವದೂತಗುಳಿಗೆ’ಯ ಭೀಮಾರಾವ್ ಪಾತ್ರಧಾರಿ ಚಿ. ರಮೇಶ್ ಕಲ್ಲಡ್ಕ ಇನ್ನಿಲ್ಲ


ಬಂಟ್ವಾಳ: ತುಳು ರಂಗಭೂಮಿಯ ಹಿರಿಯ ಕಲಾವಿದ, ‘ಶಿವದೂತಗುಳಿಗೆ’ ನಾಟಕದ ಭೀಮಾರಾವ್ ಪಾತ್ರಧಾರಿ ಚಿ. ರಮೇಶ್ ಕಲ್ಲಡ್ಕ (68) ಹೃದಯಾಘಾತದಿಂದ ಬುಧವಾರ ಬೆಳಗ್ಗೆ ಕಲ್ಲಡ್ಕದ ಕೊಳಕೀರು ಮನೆಯಲ್ಲಿ ನಿಧನ ಹೊಂದಿದ್ದಾರೆ.

ಮೃತರು ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ರಂಗಭೂಮಿಯಲ್ಲಿ 4 ದಶಕಗಳಿಂದ ಕಲಾಸೇವೆಯಲ್ಲಿ ತೊಡಗಿಸಿಕೊಂಡಿರುವ ರಮೇಶ್ ಕಲ್ಲಡ್ಕ ಅವರು ಕಳೆದ 20 ವರ್ಷಗಳಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾಸಂಗಮ ತಂಡದಲ್ಲಿ ಪೋಷಕ ಹಾಗೂ ಖಳನಟನ ಪಾತ್ರದಲ್ಲಿ ಖ್ಯಾತಿಗಳಿಸಿದ್ದರು.

ರಮೇಶ್ ಕಲ್ಲಡ್ಕ ಕಲಾಸಂಗಮದ ಎಲ್ಲಾ ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ ‘ಶಿವದೂತಗುಳಿಗೆ’ ನಾಟಕದ ಭೀಮಾರಾವ್ ಪಾತ್ರ ಅವರಿಗೆ ಪ್ರಖ್ಯಾತಿ ಮತ್ತು ಹೊಸ ಇಮೇಜನ್ನು ತಂದು ಕೊಟ್ಟಿದೆ. ಶಿವಾಜಿ ನಾಟಕದಲ್ಲೂ ಅವರು ನಿರ್ವಹಿಸಿದ ದಾದಕೊಂಡೆಯ ಪಾತ್ರ ಗಮನ ಸಳೆದಿತ್ತು.

ಸರಳ, ಸೌಮ್ಯಸ್ವಭಾವದ ರಮೇಶ್ ಕಲ್ಲಡ್ಕ ಅವರು ರಂಗಭೂಮಿಯಲ್ಲಿ ಶಿಸ್ತಿನ ಕಲಾವಿದರಾಗಿದ್ದರು. ಕಲಾಸಂಗಮದ ಮೂಲಕ ಮುಂಬೈ, ಬೆಂಗಳೂರು ಸಹಿತ ಬೇರೆ ಬೇರೆ ಊರುಗಳಲ್ಲಿ ನಾಟಕ ಪ್ರದರ್ಶನ ನೀಡಿದ್ದರು.

1957 ಏಪ್ರಿಲ್‌ನಲ್ಲಿ ಜನಿಸಿದ ಅವರು, ಶಾಂತಾರಾಮ ಕಲ್ಲಡ್ಕ ಅವರ ಮಿತ್ರಬಳಗ ಕಲಾತಂಡದ ಮೂಲಕ ತನ್ನ ರಂಗಪಯಣವನ್ನು ಎಳವೆಯಲ್ಲೇ ಆರಂಭಿಸಿದ್ದರು. ಬಳಿಕ ಶಾಂತಾರಾಮ ಕಲ್ಲಡ್ಕ ಅವರ ತುಳುವಪ್ಪೆ ಜೋಕುಲು ಕಲಾಬಳಗದಲ್ಲೂ ತೊಡಗಿಸಿಕೊಂಡ ರಮೇಶ್, ತುಳು ವೃತ್ತಿ ರಂಗಭೂಮಿ ಪ್ರವೇಶಿಸಿದರು. ಬಳಿಕ ಕಲ್ಲಡ್ಕದಲ್ಲಿ ಮೈತ್ರಿ ಕಲಾವಿದರು ತಂಡ ಸ್ಥಾಪಿಸಿ, ಕಲ್ಲಡ್ಕ ಶಾರದೋತ್ಸವದಲ್ಲಿ ತಂಡದ ನಾಟಕ ಪ್ರದರ್ಶಿಸುತ್ತಿದ್ದರು. ಬಳಿಕ ‘ರಚಿಸು ನಾಟಕ’ ತಂಡವನ್ನು ಕಟ್ಟಿದ್ದ ಅವರು ಹಲವಾರು ಸಾಮಾಜಿಕ ನಾಟಕಗಳ ಮೂಲಕ ಮಿಂಚಿದ್ದರು.

ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರ ಕಲಾಸಂಗಮ ತಂಡದಲ್ಲಿ ಸುದೀರ್ಘ ಕಾಲ ತನ್ನ ವೃತ್ತಿಪಯಣವನ್ನು ನಡೆಸಿದ ಅವರು ಆ ತಂಡದ ಹಿರಿಯ ಹಾಗೂ ಪ್ರಮುಖ ಕಲಾವಿದರಾಗಿದ್ದರು. ಎರಡು ದಿನಗಳ ಹಿಂದೆಯಷ್ಟೇ ನಾಟಕವೊಂದರಲ್ಲಿ ಅಭಿನಯಿಸಿ ಮನೆಗೆ ಮರಳಿದ್ದ ರಮೇಶ್ ಕಲ್ಲಡ್ಕ ಅವರ ನಿಧನಕ್ಕೆ ತುಳುರಂಗಭೂಮಿ ಆಘಾತಗೊಂಡಿದೆ.

ಒರಿಯರ್ದೊರಿ ಅಸಲ್, ಮದಿಮೆ ಸಹಿತ ಕೊಡಿಯಾಲ್‌ಬೈಲ್ ಅವರ ಜನಪ್ರಿಯ ತುಳು ನಾಟಕಗಳಲ್ಲಿ ರಮೇಶ್ ಅವರು ಪ್ರೇಕ್ಷಕರ, ನಾಟಕಾಭಿಮಾನಿಗಳ ಗಮನ ಸೆಳೆದಿದ್ದರು.

ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದ ಅವರು ಕಲ್ಲಡ್ಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಕಾರ್ಯಕರ್ತರು ಆಗಿದ್ದಲ್ಲದೆ ಬಿಜೆಪಿ ಗೋಳ್ತಮಜಲು ಬೂತ್ ಸಮಿತಿ ಅಧ್ಯಕ್ಷರಾಗಿಯು ಕಾರ್ಯನಿರ್ವಹಿಸಿದ್ದರು. ಕಲ್ಲಡ್ಕ ಶಾರದೋತ್ಸವ ಸಮಿತಿ ಸಹಿತ ವಿವಿಧ ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಶಾರದೋತ್ಸವ ಸಮಿತಿಯ ಸ್ಥಾಪಕ ಟ್ರಸ್ಟಿಯಾಗಿದ್ದರು. ಉತ್ತಮ ಕಾರ್ಯಕ್ರಮ ನಿರೂಪಕರಾಗಿಯು ಅವರು ಗುರುತಿಸಿಕೊಂಡಿದ್ದರು.

ಗಣ್ಯರು, ಕಲಾವಿದರಿಂದ ಅಂತಿಮ ನಮನ:

ರಮೇಶ್ ಕಲ್ಲಡ್ಕ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಗಣ್ಯರು, ರಂಗ ಕಲಾವಿದರು, ಅಭಿಮಾನಿಗಳ ದಂಡೇ ಅಗಮಿಸಿ, ಮೃತರ ಅಂತಿಮ ದರ್ಶನ ಪಡೆದರು.

ರಾ.ಸ್ವ.ಸೇ. ಸಂಘದ ಪ್ರಮುಖರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಮಾಜಿ ಶಾಸಕರಾದ ಎ. ರುಕ್ಮಯಪೂಜಾರಿ, ಪದ್ಮನಾಭ ಕೊಟ್ಟಾರಿ, ರಂಗನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್, ರಂಗ ಕಲಾವಿದ ನವೀನ್ ಡಿ. ಪಡೀಲ್ ಸಹಿತ ಹಲವಾರು ರಂಗಕಲಾವಿದರು ಅಂತಿಮ ನಮನ ಸಲ್ಲಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article