
ಧರ್ಮಸ್ಥಳ ಪ್ರಕರಣ: ಇಂದೂ ಮುಂದುವರಿದ ಧರ್ಮಸ್ಥಳ ಅನಾಮಧೇಯ ದೂರುದಾರನ ಎಸ್ಐಟಿ ತನಿಖೆ
Sunday, July 27, 2025
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಹೂತಿಟ್ಟಿದ್ದೇನೆ ಎಂದು ಹೇಳಿಕೆ ನೀಡಿರುವ ಅನಾಮಧೇಯ ದೂರುದಾರನ ಎಸ್ಐಟಿ ಅಧಿಕಾರಿಗಳೊಂದಿಗಿನ ತನಿಖೆ ಇಂದೂ ಮುಂದುವರಿದಿದೆ. ಈ ಮೂಲಕ ತನಿಖೆ ಎರಡನೇ ದಿನವಾದ ರವಿವಾರವೂ ಮುಂದುವರಿದಿದೆ.
ದೂರುದಾರ ವ್ಯಕ್ತಿಯನ್ನು ಮೂವರು ವಕೀಲರು ಖಾಸಗಿ ಕಾರಿನಲ್ಲಿ ಮಂಗಳೂರಿನ ಮಲ್ಲಿಕಟ್ಟೆಯ ಐಬಿಯಲ್ಲಿರುವ ಎಸ್ಐಟಿ ಕಚೇರಿಗೆ ಬೆಳಗ್ಗೆ 10.30ಗೆ ಕರೆ ತಂದಿದ್ದಾರೆ. ಇಂದೂ ಆತನನ್ನು ಕಪ್ಪು ಬಣ್ಣದ ಮುಸುಕಿನಲ್ಲಿಯೇ ಕರೆತರಲಾಗಿದೆ. ಸದ್ಯ ಎಸ್ಐಟಿ ಕಚೇರಿಯಲ್ಲಿರುವ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮರವರ ಮುಂದೆ ಆತನನ್ನು ಹಾಜರುಪಡಿಸಲಾಗಿದೆ. ಇಂದು ಎಸ್ಐಟಿ ತನಿಖಾ ಮುಖ್ಯಸ್ಥ ಪ್ರಣವ್ ಮೊಹಂತಿ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಶನಿವಾರ ಬೆಳಗ್ಗೆ 11ಗಂಟೆಯಿಂದ ಸಂಜೆ 7ಗಂಟೆವರೆಗೆ ತನಿಖಾಧಿಕಾರಿಗಳಾದ ಅನುಚೇತ್ ಹಾಗೂ ಜಿತೇಂದ್ರ ಕುಮಾರ್ ದಯಾಮ ಅವರಿಂದ ಆತ ವಿಚಾರಣೆ ಎದುರಿಸಿದ್ದನು. ಸಂಜೆ ವೇಳೆಗೆ ವಿಚಾರಣೆ ಮುಗಿಸಿ ರಾತ್ರಿ 7.25 ಆಗುತ್ತಿದ್ದಂತೆ ಮುಸುಕು ಹಾಕಿಕೊಂಡೇ ವಕೀಲರೊಂದಿಗೆ ಎಸ್ಐಟಿ ಕಚೇರಿಯಿಂದ ಹೊರಗೆ ಬಂದಿದ್ದಾನೆ. ಬಳಿಕ ತಾನು ಬೆಳಗ್ಗೆ ಬಂದಿದ್ದ ಕಾರಿನಲ್ಲಿಯೇ ಅಜ್ಞಾತ ಸ್ಥಳಕ್ಕೆ ತೆರಳಿದ್ದಾನೆ.