
ಯಕ್ಷ ಮೇನಕಾ 17ನೇ ವರ್ಷದ ಕಾರ್ಯಕ್ರಮ: ಪ್ರಫುಲ್ಲಚಂದ್ರ ನೆಲ್ಯಾಡಿಗೆ ಸನ್ಮಾನ, ಕಡಬ ದಿನೇಶ್ ರೈಗೆ ಯಕ್ಷ ಪ್ರೋತ್ಸಾಹ
ಮೂಡುಬಿದಿರೆ: ಕಲಾ ಸಂಘಟನೆ ಸುಲಭದ ಕಾರ್ಯವಲ್ಲ. ಅದು ಶ್ರದ್ಧೆ, ಪರಿಶ್ರಮ ಬೇಡುವ ಕೈಂಕರ್ಯ. ಯಕ್ಷ ಮೇನಕಾದವರು ಆಟ, ಕೂಟಗಳನ್ನು ಯಶಸ್ವಿಯಾಗಿ ಸಂಘಟಿಸುತ್ತಿರುವುದು ಶ್ಲಾಘನೀಯ. ದಿನೇಶ ರೈ ಅವರು ಹಾಸ್ಯಗಾರರು ಕಥೆಗೆ ಪೂರಕವಾಗಿ ಯಾವುದೋ ಸಂದೇಶ ನೀಡುವ ಉತ್ಸಾಹ ಹೊಂದಿರುತ್ತಾರೆಯೇ ಹೊರತು ಇತರ ಉದ್ದೇಶದಿಂದಲ್ಲ ಎಂದು ಯಕ್ಷ ಸಂಘಟಕ ಬಿ. ಭುಜಬಲಿ ಧರ್ಮಸ್ಥಳ ಹೇಳಿದರು.
ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಕಲಾಮಂದಿರದಲ್ಲಿ ಯಕ್ಷ ಮೇನಕಾ ಮೂಡುಬಿದಿರೆಯ 17ನೇ ವರ್ಷದ ಕಾರ್ಯಕ್ರಮದಲ್ಲಿ ಭಾನುವಾರ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಭಾಗವತ ಪ್ರಫುಲ್ಲಚಂದ್ರ ನೆಲ್ಯಾಡಿ ಅವರನ್ನು ಸನ್ಮಾನಿಸಲಾಯಿತು. ಹಾಸ್ಯಗಾರ ಕಡಬ ದಿನೇಶ ರೈ ಅವರಿಗೆ ಯಕ್ಷ ಪ್ರೋತ್ಸಾಹ ನೀಡಿ ಸಮರ್ಪಿಸಿ ಗೌರವಿಸಲಾಯಿತು.
ಪ್ರಧಾನ ಪ್ರೋತ್ಸಾಹಕರಾದ, ರಂಗಸ್ಥಳ ಮಂಗಳೂರು ಅಧ್ಯಕ್ಷ ಎಸ್.ಎಲ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಎ.ಎಸ್. ಭಟ್ ಮಂಗಳೂರು, ಯಕ್ಷ ಚೈತನ್ಯದ ಅಧ್ಯಕ್ಷ ಕೃಷ್ಣಮೂರ್ತಿ ಕಟೀಲು, ಭಾಗವತ ಮಾಧವ ಆಚಾರ್ಯ ಸಂಪಿಗೆ, ಪ್ರಗತಿಪರ ಕೃಷಿಕ ರಮೇಶ್ ಭಟ್ ಕೇಂಜೆ, ಪೊನ್ನೆಚಾರಿ ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಅಶೋಕ ಕಾಮತ್ ಮುಖ್ಯ ಅತಿಥಿಗಳಾಗಿದ್ದರು.
ಯಕ್ಷ ಮೇನಕಾ ಅಧ್ಯಕ್ಷ ಸದಾಶಿವ ರಾವ್ ನೆಲ್ಲಿಮಾರು ಸ್ವಾಗತಿಸಿ ಪ್ರಸ್ತಾವನೆಗೈದರು. ಅನಂತ ನೆಲ್ಲಿಮಾರು, ನಾಗರಾಜ ಶರ್ಮ ಸನ್ಮಾನ ಪತ್ರಗಳನ್ನು ವಾಚಿಸಿದರು. ಶಿವದತ್ತ ಭಟ್ ನಿರೂಪಿಸಿ, ಸುಬ್ರಹ್ಮಣ್ಯ ಶೆಟ್ಟಿ ವಂದಿಸಿದರು.
ಬಳಿಕ ನಡೆದ ‘ಶ್ರೀ ರಾಮಾಂಜನೇಯ’ ಯಕ್ಷಗಾನ ತಾಳಮದ್ದಳೆಯಲ್ಲಿ ನೆಲ್ಯಾಡಿ, ಭರತ್‌ರಾಜ್, ದೇವಾನಂದ, ಶ್ರೀಧರ, ವಗೆನಾಡು, ಮುರಾರಿ, ಉಜಿರೆ, ಹಿರಣ್ಯ, ಪವನ್, ಪಶುಪತಿ, ಡಾ. ಮಹೇಶ್, ದಿನೇಶ್ ರೈ ಪಾಲ್ಗೊಂಡಿದ್ದರು.