
ಶ್ರೀ ಮಹಾವೀರ ಕಾಲೇಜಿನಲ್ಲಿ "ಕಾರ್ಗಿಲ್ ವಿಜಯ ದಿವಸ’
ಮೂಡುಬಿದಿರೆ: 1999ರ ಕಾರ್ಗಿಲ್ ಯುದ್ಧದಲ್ಲಿ ಭಾರತ ಸಾಧಿಸಿದ ವಿಜಯವನ್ನು ಸ್ಮರಿಸುವ ದಿನ ಕಾರ್ಗಿಲ್ ವಿಜಯ್ ದಿವಸ್. ದೇಶದ ಸಾರ್ವಭೌಮತ್ವನ್ನು ಶೌರ್ಯದಿಂದ ರಕ್ಷಿಸಿದ ಭಾರತೀಯ ಸೈನಿಕರ ಧೈರ್ಯ, ಸ್ಟೈಯ೯, ತ್ಯಾಗ, ಬಲಿದಾನವನ್ನು ಕೊಂಡಾಡಿಕೊಂಡು ಹಾಡಿ ಹೊಗಳುವ ಹೆಮ್ಮೆಯ ದಿನ. ಕಾರ್ಗಿಲ್ ಯುದ್ಧದ ದಿನಗಳನ್ನು ನಾವು ಇಂದು ನೆನಪಿಸಿಕೊಂಡಾಗ ಮೈ ರೋಮಾಂಚನಗೊಳ್ಳುತ್ತದೆ. ನಮ್ಮ ದೇಹದ ರಕ್ತ ಸಂಚಲನ ಹೆಚ್ಚುತ್ತದೆ ಎಂದು ಮಾಜಿ ಸೈನಿಕ ಹವಲ್ದಾರ್ ನವಾನಂದ ಹೇಳಿದರು.
ಅವರು ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆದ ‘ಕಾರ್ಗಿಲ್ ವಿಜಯ ದಿವಸ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ‘ಭಾರತ ದೇಶದ ಸ್ವರ್ಗವಾದ ಕಾಶ್ಮೀರ ಸದಾ ಕಾಲ ಬೂದಿ ಮುಚ್ಚಿದ ಕೆಂಡ. ಸಂಘರ್ಷ ಭುಗಿಲೇಳುವ ಸಂದರ್ಭವನ್ನು ಊಹಿಸಲು ಸಾಧ್ಯವಿಲ್ಲ. ಕಷ್ಟಕರವಾದ ಗುಡ್ಡಗಾಡು ಪ್ರದೇಶ, ಪ್ರತಿಕೂಲ ಹವಾಮಾನದ ನಡುವೆಯೂ ಯೋಧರು ಆಪರೇಶನ್ ವಿಜಯ್ ಮೂಲಕ ಜಯ ಸಾಧಿಸಿಕೊಟ್ಟರು. ಆ ಹಾದಿಯಲ್ಲಿ ಮಡಿದ ಅದಮ್ಯ ಚೇತನಗಳಿಗೆ ನಾವು ಗೌರವ ಸಲ್ಲಿಸಬೇಕು. ಅವರ ಶೌರ್ಯ,ನಿರ್ಭಯದ ಹಾದಿ ನಮಗೆಲ್ಲ ಸ್ಫೂರ್ತಿ. ಸೈನ್ಯಕ್ಕೆ ಸೇರಿಯೇ ಸೇವೆ ಸಲ್ಲಿಸಬೇಕೆಂದಿಲ್ಲ. ಯುವಕರಾದ ನೀವು ಎನ್ ಸಿಸಿ ಘಟಕ ಸೇರುವ ಮೂಲಕ ತಮ್ಮದೇ ಆದ ರೀತಿಯಲ್ಲಿ ಸಮಾಜಕ್ಕೆ, ದೇಶಕ್ಕೆ ಸೇವೆಯನ್ನು ಸಲ್ಲಿಸಬಹುದು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲೆಫ್ಟಿನೆಂಟ್ ವಿಜಯಲಕ್ಷ್ಮೀ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಹರೀಶ್ ,ಜೆಯುಒ ಶ್ರೇಯ ಎಸ್.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆಡೆಟ್ ಪ್ರೇರಣ್ ಸ್ವಾಗತಿಸಿ, ಕೆಡೆಟ್ ಚಂದ್ರಶೇಖರ್ ವಂದಿಸಿದರು. ಕೆಡೆಟ್ ಪ್ರತಿಷ್ಠಾ ಕಾಯ೯ಕ್ರಮ ನಿರೂಪಿಸಿದರು.