
ಕಡಂದಲೆ ಪರಾಡಿ ಬಾಕಿಮಾರು ಗದ್ದೆಯಲ್ಲಿ ನಾಟಿ
ಭತ್ತದ ಕೃಷಿಗೆ ಯುವ ಜನತೆ ಒಲವು ತೋರಿಸಬೇಕು: ಜಯಲಕ್ಷ್ಮೀ
ಮೂಡುಬಿದಿರೆ: ಜಿಲ್ಲೆಯಲ್ಲಿ ಭತ್ತದ ಕೃಷಿಗೆ ಅನುಗುಣವಾದ ಭೌಗೋಳಿಕ ವಾತಾವರಣವಿದ್ದು, ಯುವಜನರು ಅದರತ್ತ ಹೆಚ್ಚಿನ ಒಲವು ತೋರಿಸಬೇಕೆಂದು ದ.ಕ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮೀ ಹೇಳಿದರು.
ಪುತ್ತಿಗೆಗುತ್ತು ಕಡಂದಲೆ ಪರಾಡಿಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಅವರ ಗದ್ದೆಯಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್, ರೋಟರಿ ಕ್ಲಬ್ ಮಂಗಳೂರು ಕೋಸ್ಟಲ್ ಹಾಗೂ ಸಚ್ಚೇರಿಪೇಟೆ ಲಯನ್ಸ್ ಆಂಗ್ಲಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ಗದ್ದೆ ನಾಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕರಾವಳಿ ಕರ್ನಾಟಕದ ಕೃಷಿ ಚಟುವಟಿಕೆ ಅದು ದೈವ-ದೇವರನ್ನು ಮುಂದಿಟ್ಟುಕೊಂಡು ನಡೆಯುವ ಆಧ್ಯಾತ್ಮ ಹಾಗೂ ಪರಂಪರೆಯ ಕಾರ್ಯ. ಹಳೇ ಬೇರುಗಳಿಂದ ಹೊಸ ತಲೆಮಾರಿಗೆ ಈ ಪರಂಪರೆ ಮುಂದುವರೆಯಲು ಗದ್ದೆ ನಾಟಿಯಂತಹ ಕಾರ್ಯಕ್ರಮಗಳು ಪೂರಕವಾದ ವಾತಾವರಣವನ್ನು ನಿಮಿ೯ಸುತ್ತವೆ ಎಂದ ಅವರು ಸರ್ಕಾರಿ ಅಧಿಕಾರಿಗಳು ಹಾಗೂ ಜನರ ಮಧ್ಯೆ ಅಂತರವಿರಬಾರದು. ಎರಡೂ ಕಡೆಗಳಿಂದ ಸಕಾರತ್ಮಕ ರೀತಿಯಲ್ಲಿ ಸರ್ಕಾರ ಕೆಲಸ ನಡೆದರೆ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬಹುದು ಎಂದರು.
ಪುತ್ತಿಗೆಗುತ್ತು ಕಡಂದಲೆ ಪರಾಡಿಯ ಯಜಮಾನ ಕೆ.ಪಿ ಸಂತೋಷ್ ಕುಮಾರ್ ಎಂ.ಶೆಟ್ಟಿ ದೈವ-ದೇವರಿಗೆ ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೆ.ಎಂ.ಎಫ್ ನಿರ್ದೇಶಕ ಕೆ.ಪಿ. ಸುಚರಿತ ಶೆಟ್ಟಿ ಮಾತನಾಡಿ, ಯುವ ಜನರು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ, ಕೃಷಿ ಪರಂಪರೆಯನ್ನು ಮರೆಯಬಾರದು. ತಂತ್ರಜ್ಞಾನವನ್ನು ಬಳಸಿ ಕೃಷಿ, ತೋಟಗಾರಿಕೆ ಮಾಡುವತ್ತ ಯುವಜನರು ಮುಂದಾಗಬೇಕು. ತುಳುನಾಡಿನ ಕೃಷಿ ಪರಂಪರೆಯ ಮಣ್ಣಿನ ಸಂಸ್ಕೃತಿಯಲ್ಲಿ ಸಂಸ್ಕಾರವಿದೆ ಎಂದರು.
ಗುತ್ತಿನ ಮನೆಯವರು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮೀ ಅವರನ್ನು ಸನ್ಮಾನಿಸಿದರು.
ವಾರ್ತಾಧಿಕಾರಿ ಖಾದರ್ ಶಾ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಕೋಶಾಧಿಕಾರಿ ಪುಷ್ಪರಾಜ್, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ಅಧ್ಯಕ್ಷ ಭಾಸ್ಕರ್ ರೈ ಕಟ್ಟ, ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ಕೋಶಾಧಿಕಾರಿ ರಾಜೇಶ್ ಸೀತಾರಾಮ್, ಸದಸ್ಯ ಪ್ರಕಾಶ್ ಆಚಾರ್ಯ, ರೋಟರಿ ಕ್ಲಬ್ ಕೋಸ್ಟಲ್‌ನ ಅಧ್ಯಕ್ಷ ಸುಬೋದದಾಸ್, ಕಾರ್ಯದರ್ಶಿ ಕಿರಣ್ ರೈ, ಕೋಶಾಧಿಕಾರಿ ನವೀನ್ ಇಡ್ಯಾ, ರೆಡ್‌ಕ್ರಾಸ್ ದ.ಕ ಜಿಲ್ಲಾ ಘಟಕದ ಕೋಶಾಧಿಕಾರಿ ಮೋಹನ ಶೆಟ್ಟಿ, ಜಿ.ಪಂ ಮಾಜಿ ಸದಸ್ಯೆ ಸುನೀತಾ ಸುಚರಿತ ಶೆಟ್ಟಿ, ಪಾಲಡ್ಕ ಗ್ರಾಪಂ ಮಾಜಿ ಅಧ್ಯಕ್ಷ ದಿನೇಶ್ ಕಂಗ್ಲಾಯಿ, ಸದಸ್ಯರಾದ ರಂಜಿತ್ ಭಂಡಾರಿ, ಸುಕೇಶ್ ಶೆಟ್ಟಿ ಕೇಮಾರು, ಸುಕೇಶ್ ಪೂಜಾರಿ ಶೆಡ್ಯ, ಪತ್ರಕರ್ತ ಶರತ್ ಶೆಟ್ಟಿ, ಲಯನ್ಸ್ ಶಾಲೆಯ ಶಿಕ್ಷಕಿಯರಾದ ಜಯಲಕ್ಷ್ಮೀ ನಾಯಕ್, ಜ್ಯೋತಿ ಎಸ್., ಶರ್ಮಿಳಾ ಸಾಲ್ಯಾನ್ ಉಪಸ್ಥಿತರಿದ್ದರು.