
ಕಡಲಕೆರೆ ಪ್ರೇರಣಾ ಶಾಲೆಯಲ್ಲಿ "ಯಕ್ಷಧ್ರುವ-ಯಕ್ಷ ಶಿಕ್ಷಣ" ಆರಂಭ
ಮೂಡುಬಿದಿರೆ: ಇಲ್ಲಿನ ಕಡಲಕೆರೆ ಪ್ರೇರಣಾ ಶಾಲೆಯಲ್ಲಿ ಸುಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಮಂಗಳೂರು-ಇವರ ಮಹತ್ವಾಕಾಂಕ್ಷೆಯ ಯೋಜನೆಯಾದ "ಯಕ್ಷಧ್ರುವ-ಯಕ್ಷ ಶಿಕ್ಷಣ"ದ ಉದ್ಘಾಟನೆಯು ಸೋಮವಾರ ನೆರವೇರಿತು. (ಉದ್ಯಮಿ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಕೇಂದ್ರೀಯ ಸಮಿತಿಯ ಟ್ರಸ್ಟಿಗಳಾದ ಪ್ರೇಮನಾಥ ಮಾರ್ಲ ದೀಪ ಪ್ರಜ್ವಲನ ಮಾಡುವ ಮೂಲಕ " ಯಕ್ಷ-ಶಿಕ್ಷಣ"ಕ್ಕೆ ಚಾಲನೆ ನೀಡಿದರು .
ಸೇವಾಂಜಲಿ ಎಜುಕೇಷನಲ್ ಟ್ರಸ್ಟ್ ಪ್ರವರ್ತಿತ ಪ್ರೇರಣಾ ಶಾಲೆಯ ಸಂಚಾಲಕ ಎಂ. ಶಾಂತರಾಮ ಕುಡ್ವ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಕಲೆ, ಸಂಸ್ಕೃತಿ, ಕ್ರೀಡೆಗಳು ಅಳಿಯದೇ, ಉಳಿಯಬೇಕಾದರೆ ಯುವಜನರ, ವಿದ್ಯಾರ್ಥಿಗಳ ತೊಡಗಿಸುವಿಕೆ ಮುಖ್ಯ. ಈ ನಿಟ್ಟಿನಲ್ಲಿ, ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಕೊಂಡು ಹೋಗಲು, ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಉಚಿತ "ಯಕ್ಷ ಶಿಕ್ಷಣ"ದ ವ್ಯವಸ್ಥೆ ಮಾಡುವ ಮೂಲಕ ಪಟ್ಲ ಫೌಂಡೇಶನ್ ಮುಂಚೂಣಿಯಲ್ಲಿದ್ದು ಮಾದರಿಯಾಗಿ ನಿಲ್ಲತ್ತದೆ. ಪಟ್ಲ ಫೌಂಡೇಶನ್ ಕಲಾವಿದರ ಬಗ್ಗೆ ಮಾತ್ರವಲ್ಲದೇ ಯಕ್ಷಗಾನದ ಭವಿಷ್ಯದ ಬಗ್ಗೆಯೂ ಗಮನ ಹರಿಸಿರುವುದು ಉತ್ತಮ ಬೆಳವಣಿಗೆ" ಎಂದರು.
ಸೇವಾಂಜಲಿ ಎಜುಕೇಷನಲ್ ಟ್ರಸ್ಟ್ ನ ಅಧ್ಯಕ್ಷ ರಾಜೇಶ್ ಬಂಗೇರರು ಉಪಸ್ಥಿತರಿದ್ದು ಶುಭ ಹಾರೈಸಿದರು . ಯಕ್ಷ ಗುರುಗಳಾದ ಅಕ್ಷಯ ಭಟ್ ರವರು ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣದ ಕುರಿತಾಗಿ ಮಾಹಿತಿ ಹಾಗೂ ಅದರಿಂದ ಲಭ್ಯವಾಗುವ ಅನುಕೂಲತೆಯ ಬಗ್ಗೆ ತಿಳಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮೂಡುಬಿದಿರೆ ಘಟಕದ ಅಧ್ಯಕ್ಷ ದಿವಾಕರ ಶೆಟ್ಟಿ ಖಂಡಿಗ, ಸಂಚಾಲಕರಾದ ಮನೋಜ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸೇವಾಂಜಲಿಯ ಕೋಶಾಧಿಕಾರಿ ಎಸ್.ಎನ್.ಬೋರ್ಕರ್, ಉಪಾಧ್ಯಕ್ಷ ಶ್ರೀ ಸೋಮನಾಥ ಕೋಟ್ಯಾನ್, ಸದಸ್ಯರಾದ ಮಂಜುನಾಥ ಶೆಟ್ಟಿ, ಆನಂದ ಕಾರ್ಲ ಹಾಗೂ ಯಕ್ಷಧ್ರುವ ಫೌಂಡೇಶನ್ ನ ಸದಸ್ಯರಾದ ಸಚಿನ್ ಮತ್ತು ಧನಂಜಯ ಉಪಸ್ಥಿತರಿದ್ದರು.
ರವಿಪ್ರಸಾದ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕರಾವಳಿಯ ಮಣ್ಣಿನ ಕಲೆಯಾದ ಯಕ್ಷಗಾನದ ಬಗ್ಗೆ ಅತೀವ ಕಾಳಜಿಯುಳ್ಳ ಪಟ್ಲ ಸತೀಶ ಶೆಟ್ಟಿ ಅವರು ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಅಭಿರುಚಿ ಮೂಡಿಸಲು ಶಾಲೆಗಳಲ್ಲಿ ಉಚಿತ ಯಕ್ಷಗಾನ ತರಬೇತಿ ನೀಡುವ ಅಭಿಯಾನ ಕೈಗೊಂಡಿರುವುದು ಸ್ತುತ್ಯಾರ್ಹ. ಕಲಾವಿದರ ಪಾಲಿನ ಕಾಮಧೇನು ಎನಿಸಿದ ಪಟ್ಲ ಭಾಗವತರ ಈ ಹೊಸ ಪರಿಕಲ್ಪನೆ ಹಲವಾರು ವಿದ್ಯಾರ್ಥಿಗಳಿಗೆ ವರದಾನವಾಗಿದೆ" ಎಂದರು.
ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಸ್ವಾಗತಿಸಿದರು. ಶಿಕ್ಷಕಿ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಸುರೇಂದ್ರ ವಂದಿಸಿದರು.