ಮರಳು ಕಡತಗಳಲ್ಲಿ ತಪ್ಪು: ಅಧಿಕಾರಿಗಳಿಗೆ ಎಸಿ ಸ್ಟೆಲ್ಲಾ ವರ್ಗೀಸ್ ಕ್ಲಾಸ್..!

ಮರಳು ಕಡತಗಳಲ್ಲಿ ತಪ್ಪು: ಅಧಿಕಾರಿಗಳಿಗೆ ಎಸಿ ಸ್ಟೆಲ್ಲಾ ವರ್ಗೀಸ್ ಕ್ಲಾಸ್..!


ಪುತ್ತೂರು: ಮರಳನ್ನು ಗುರುತಿಸಿರುವ ಬ್ಲಾಕ್‌ಗಳ ಕಡತಗಳಲ್ಲಿ ವ್ಯತ್ಯಾಸಗಳನ್ನು ಕಂಡು ಸಮಸ್ಯೆಗಳ ಕಡತಗಳನ್ನು ತರುವುದರ ಅಗತ್ಯವೇನಿದೆ. ಸಂಬಂಧಪಟ್ಟ ಅಧಿಕಾರಿಗಳು ಸರಿಯಾಗಿ ಜವಾಬ್ದಾರಿ ವಹಿಸಬೇಕು. ನಿಮಗ್ಯಾರಿಗೂ ಗ್ರೌಂಡ್‌ವರ್ಕ್ ಮಾಡುವ ಆಸಕ್ತಿಯೇ ಇಲ್ಲ. ಹೀಗಾದರೆ ಕಡತ ವಿಲೇವಾರಿ ಸಾಧ್ಯವೇ ಇಲ್ಲ. ನನ್ನ ತನಕ ಈ ತಪ್ಪುಗಳನ್ನು ತರುವುದಾದರೆ ನೀವು ತಳ ಹಂತದಲ್ಲಿ ಏನು ಮಾಡುತ್ತಿದ್ದೀರಿ ಎಂದು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪುತ್ತೂರು ಉಪ ವಿಭಾಗ ಮಟ್ಟದ ಮರಳು ಸಮಿತಿ ಸಭೆ ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಹಾಯಕ ಆಯುಕ್ತರ ನ್ಯಾಯಾಲಯ ಸಭಾಂಗಣದಲ್ಲಿ ನಡೆಸಲಾಯಿತು.

ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬಗಳಲ್ಲಿ ಗುರುತಿಸಲಾಗಿರುವ ಮರಳು ಬ್ಲಾಕ್‌ಗಳ ಮಾಹಿತಿ ಪಡೆದ ಎಸಿಯವರು ಸಮರ್ಪಕವಾಗಿರುವ ಬ್ಲಾಕ್‌ಗಳ ಕುರಿತ ಕಡತವನ್ನು ಡಿ.ಸಿ.ಯವರಿಗೆ ವರದಿ ಮಾಡುವುದು ಹಾಗೂ ಸರ್ವೇ ನಂಬರ್ ಸೇರಿದಂತೆ ವ್ಯತ್ಯಾಸಗಳಿರುವ ಬ್ಲಾಕ್‌ಗಳ ಕಡತವನ್ನು ವಾರದೊಳಗೆ ಸರಿಪಡಿಸಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಪುತ್ತೂರು ತಾಲೂಕು:

ಪುತ್ತೂರು ತಾಲೂಕಿನಲ್ಲಿ ಉಪ್ಪಿನಂಗಡಿಯ ಸಮೀಪ ನೇತ್ರಾವತಿ ಬಳಿ 6 ಎಕ್ರೆಯಲ್ಲಿ ಮರಳು ಬ್ಲಾಕ್ ಜಾಗ ಗೊತ್ತುಪಡಿಸಿದ್ದು, ಜಲ್ಲಿ ಸಹಿತವಾದ 42 ಸಾವಿರ ಮೆಟ್ರಿಕ್ ಟನ್ ಮರಳಿದೆ. ಇದರಲ್ಲಿ 25 ಸಾವಿರ ಮೆಟ್ರಿಕ್ ಟನ್ ಗುಣಮಟ್ಟದ ಮರಳೆಂದು ಅಂದಾಜಿಸಲಾಗಿದೆ. ಮ್ಯಾಪಿಂಗ್ ಹಾಗೂ ಸರ್ವೇ ನಂಬರ್ ವ್ಯತ್ಯಾಸವಿರುವುದರಿಂದ ಅದು ಸರಿಯಾಗಿ ಬಂದ ಬಳಿಕವೇ ಜಿಲ್ಲಾಡಳಿತಕ್ಕೆ ಕಳಹಿಸಲಾಗುವುದು. ಮರಳು ಬ್ಲಾಕ್ ವರ್ಕ್ ಆರ್ಡರ್ ಆದ ಮೇಲೆ ಸರ್ವೇ ನಂಬರ್ ಬದಲಾವಣೆಯಾಗಿದೆ ಎಂಬ ದೂರು ಬರದಂತೆ ಆರಂಭದಲ್ಲೇ ಎಚ್ಚರ ವಹಿಸಬೇಕು ಎಂದು ಸ್ಟೆಲ್ಲಾ ವರ್ಗೀಸ್ ಹೇಳಿದರು.

ಸುಳ್ಯ ತಾಲೂಕು:

ಸುಳ್ಯ ತಾಲೂಕಿನಲ್ಲಿ 2 ಎಕ್ರೆ ಜಾಗ ಗುರುತಿಸಲಾಗಿದ್ದು, 9400 ಮೆಟ್ರಿಕ್ ಟನ್ ಮರಳನ್ನು ಅಂದಾಜಿಸಲಾಗಿದೆ. ಆದರೆ ಸುಳ್ಯದ ಏಕೈಕ ಬ್ಲಾಕ್‌ಗೆ ಅರಣ್ಯ ಇಲಾಖೆಯ ಆಕ್ಷೇಪವಿದ್ದು, ಇದನ್ನು ಮುಂದುವರಿಸಲು ಅಸಾಧ್ಯ ಎಂದು ಚರ್ಚೆಯ ಬಳಿಕ ಸಭೆ ತೀರ್ಮಾನಿಸಿತು.

ಕಡಬ ತಾಲೂಕು:

ಕಡಬ ತಾಲೂಕು ವ್ಯಾಪ್ತಿಯಲ್ಲಿ 4 ಜಾಗ ಗುರುತಿಸಿದ್ದು, ಗುಂಡ್ಯ ಹೊಳೆ ಬಳಿ 2.5 ಎಕ್ರೆ, ಪೆರಾಬೆಯಲ್ಲಿ 5 ಹಾಗೂ 6 ಎಕ್ರೆ, ಕುದ್ಮಾರು 2.25 ಎಕ್ರೆ ಜಾಗ ಗುರುತಿಸಲಾಗಿದೆ. ಗುಂಡ್ಯ ಬ್ಲಾಕ್ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಬೇಕು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು 4 ಬ್ಲಾಕ್‌ಗಳಿಗೂ ಭೇಟಿ ನೀಡಿ ವರದಿ ನೀಡುವಂತೆ ಉಪ ವಿಭಾಗಾಧಿಕಾರಿ ಸೂಚನೆ ನೀಡಿದರು.

ಬೆಳ್ತಂಗಡಿ ತಾಲೂಕು:

ಬೆಳ್ತಂಗಡಿಯಲ್ಲಿ ತಾಲೂಕಿನಲ್ಲಿ 5 ಬ್ಲಾಕ್‌ಗಳನ್ನು ಗುರುತಿಸಲಾಗಿದ್ದು, ಮೊಗ್ರುವಿನಲ್ಲಿ 4.40 ಹಾಗೂ 5 ಎಕ್ರೆ, ಬಂದಾರು ೪ ಎಕ್ರೆ, ಇಳಂತಿಲ 10 ಎಕ್ರೆ, ಚಿಬಿದ್ರೆಯಲ್ಲಿ 1.50 ಎಕ್ರೆ ಜಾಗ ಗುರುತಿಸಲಾಗಿದೆ. ಇದರಲ್ಲಿ ಇಳಂತಿಲದಲ್ಲಿ ಗುರುತಿಸಲಾದ ಜಾಗದ ಸರ್ವೇ ನಂಬರ್ ಹಾಗೂ ವಿಸ್ತೀರ್ಣ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆಯಲ್ಲಿ ವಾರದಲ್ಲಿ ಸರಿಪಡಿಸಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಸುಳ್ಯ ತಹಸೀಲ್ದಾರ್‌ಗೆ ನೋಟೀಸ್ ಜಾರಿಗೊಳಿಸಲು ಸೂಚನೆ ನೀಡಿದರು.

ಪುತ್ತೂರು ತಾಲೂಕು ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸುಳ್ಯದ ರಾಜಣ್ಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಸ್ತ ಶೆಟ್ಟಿ, ವಲಯ ಅರಣ್ಯಧಿಕಾರಿಗಳಾದ ಸಂಧ್ಯಾ, ಕಿರಣ್ ಬಿ.ಎಂ., ತ್ಯಾಗರಾಜ್, ಆರ್.ಟಿ.ಒ. ವಿಶ್ವನಾಥ ಅಜಿಲ, ಇನ್ಸ್‌ಪೆಕ್ಟರ್ ಜಾನ್ಸನ್ ಡಿಸೋಜ, ಪುತ್ತೂರು ಪ್ರಭಾರ ತಹಶೀಲ್ದಾರ್ ನಾಗರಾಜ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ, ಕಡಬದ ಪ್ರಭಾಕರ್, ಲೋಕೋಪಯೋಗಿ ಕಾರ್ಯಪಾಲಕ ಇಂಜಿನಿಯರ್ ರಾಜೇಶ್ ರೈ ಸೇರಿದಂತೆ ಗಣಿ ಇಲಾಖೆ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಉಪವಿಭಾಗದ ತಾಲೂಕುಗಳ ಮರಳು ಸಮಿತಿಗೆ ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article