
ಪೈಪ್ ಅಳವಡಿಕೆಗೆ ಕಡಿದು ಹಾಕಿ ಸರಿಪಡಿಸದ ರಸ್ತೆ: ನಗರ ಪಂಚಾಯತ್ ಸಭೆಯಲ್ಲಿ ಗದ್ದಲ
ಸುಳ್ಯ: ಸುಳ್ಯ ನಗರದಲ್ಲಿ ಅನುಷ್ಠಾನ ಆಗುತ್ತಿರುವ ಅಮೃತ್ 2.0 ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಅಳವಡಿಕೆಗೆ ಸಂಬಂಧಪಟ್ಟು ಕಡಿದು ಹಾಕಿದ ರಸ್ತೆ ಹಾಗೂ ರಸ್ತೆ ಬದಿ ದುರಸ್ತಿ ಮಾಡದೆ ಇರುವುದರಿಂದ ನಗರದಲ್ಲಿ ಜನರ ಸಂಚಾರಕ್ಕೆ ಸಮಸ್ಯೆಯಾಗಿರುವ ಬಗ್ಗೆ ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಕಡಿದು ಹಾಕಿದ ರಸ್ತೆಯನ್ನು ಸರಿಪಡಿಸಲು ಆಗದಿದ್ದರೆ ಸಾಧ್ಯ ಆಗುವುದಿಲ್ಲ ಎಂದು ಆಡಳಿತ ಪಕ್ಷದವರು ಸಾರ್ವಜನಿಕವಾಗಿ ಹೇಳಿ ಎಂದು ವಿರೋಧ ಪಕ್ಷದ ಸದಸ್ಯರು ಸವಾಲು ಹಾಕಿದ ಘಟನೆಯೂ ನಡೆಯಿತು.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಸ್ತೆಯ ಸಮಸ್ಯೆ ಬಗ್ಗೆ ಬಹಳ ಹೊತ್ತು ಚರ್ಚೆ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಕೆ.ಎಸ್. ಉಮ್ಮರ್ ಕಾಮಗಾರಿ ಹಲವು ತಿಂಗಳುಗ ಹಿಂದೆ ನಡೆಸಿ ಕಡಿದು ಹಾಕಿದ ರಸ್ತೆ ಸರಿಪಡಿಸದೆ ಸಂಪೂರ್ಣ ಎಕ್ಕುಟ್ಟಿ ಹೋಗಿ ಜನರಿಗೆ ನಡೆದಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣ ಆಗಿದೆ. ಮಾರ್ಚ್ ತಿಂಗಳ ಕೊನೆಯ ವೇಳೆಗೆ ಕಡಿದು ಹಾಕಿದ ಎಲ್ಲಾ ರಸ್ತೆಯನ್ನು ಸರಿಪಡಿಸುವುದಾಗಿ ಹೇಳಿದ್ದರೂ ಆಗಿಲ್ಲ. ಶಾಸಕರು ಸಭೆ ನಡೆಸಿ 15 ದಿನದಲ್ಲಿ ಸರಿಪಡಿಸಲು ಸೂಚನೆ ನೀಡಿ ಒಂದು ತಿಂಗಳು ಕಳೆದರೂ ಮಾಡಿಲ್ಲ. ಇದು ಯಾಕೆ ಹೀಗೆ ಇದು ಸರಿ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ನಗರದಲ್ಲಿ ಅನುಷ್ಠಾನವಾಗುತ್ತಿರುವ ಅತೀ ದೊಡ್ಡ ಯೋಜನೆ ಇದು, ಕಡಿದು ಹಾಕಿದ ರಸ್ತೆ ಬದಿ, ಸರಿಪಡಿಸಲು ಸಾಕಷ್ಟು ಒತ್ತಡ ತಂದರೂ ಸರಿಪಡಿಸಿಲ್ಲ ಎಂದು ಹೇಳಿದರು. ಕಾಮಗಾರಿ ನಡೆಸಿ ನಿರ್ವಹಣೆ ಸರಿಯಾಗಿ ಮಾಡದ ಬಗ್ಗೆ ಕ್ರಮಕ್ಕೆ ಮೇಲಧಿಕಾರಿಗಳಿಗೆ ದೂರು ನೀಡಬೇಕು ಎಂದು ಸದಸ್ಯ ವಿನಯಕುಮಾರ್ ಕಂದಡ್ಕ ಹೇಳಿದರು.
ಈ ಸಂದರ್ಭದಲ್ಲಿ ನ.ಪಂ. ಅಧ್ಯಕ್ಷೆ ಶಶಿಕಲಾ, ಸದಸ್ಯ ವಿನಯ ಕುಮಾರ್ ಕಂದಡ್ಕ ಹಾಗೂ ವಿಪಕ್ಷ ಸದಸ್ಯರಾದ ಕೆ.ಎಸ್. ಉಮ್ಮರ್, ಶರೀಫ್ ಕಂಠಿ ಮಧ್ಯೆ ವಾಗ್ವಾದ ನಡೆಯಿತು. ಸಭೆಯ ಹಲವು ಹೊತ್ತು ಈ ವಿಷಯದ ಬಗ್ಗೆ ಚರ್ಚೆ ನಡೆಯಿತು. ಆಡಳಿತ-ವಿಪಕ್ಷ ಸದಸ್ಯರ ಮಧ್ಯೆ ತೀವ್ರ ವಾಗ್ವಾದಕ್ಕೂ ವೇದಿಕೆಯಾಯಿತು.
ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ನೀರಿನ ಯೋಜನೆ ಘಟಕಗಳ ನಿರ್ಮಾಣ ಆಗಿರುವ ಸಂದರ್ಭದಲ್ಲಿ ಸಮಸ್ಯೆ ಆಗಿದೆ. ಈ ಕುರಿತು ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿಯೂ ಚರ್ಚೆ ಆಗಿದೆ. ಕಡಿದು ಹಾಕಿದ ರಸ್ತೆಯನ್ನು 15 ದಿನದಲ್ಲಿ ಸರಿಪಡಿಸಿ ನಿರ್ವಹಣೆ ಮಾಡುವುದಾಗಿ ಇಂಜಿನಿಯರ್‌ಗಳು ತಿಳಿಸಿದ್ದಾರೆ ಎಂದು ಮುಖ್ಯಾಧಿಕಾರಿ ಸುಧಾಕರ ಎಂ.ಎಚ್ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್.ಉಮ್ಮರ್ ಇಷ್ಟು ಸಮಸ್ಯೆ ಇದ್ದರೂ ಯಾಕೆ ಕ್ರಮಕ್ಕೆ ಮೇಲಧಿಕಾರಿಗಳಿಗೆ ಬರೆದಿಲ್ಲ ಎಂದು ಪ್ರಶ್ನಿಸಿದರು. ಮುಂದಿನ 15 ದಿನಗಳೊಳಗೆ ಅಂದರೆ ಜುಲೈ ೧೫ರೊಳಗೆ ರಸ್ತೆ ದುರಸ್ತಿ ಮಾಡದಿದ್ದರೆ ನಗರ ಪಂಚಾಯತ್ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಹೇಳಿದರು.
ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ ಹಾಗೂ ನಗರ ಪಂಚಾಯತ್ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು. ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಸ್ವಾಗತಿಸಿದರು.