
ಆನೆ ಹಾಗೂ ಇತರ ವನ್ಯಜೀವಿಗಳ ಹಾವಳಿ ತಡೆಗೆ ಶಾಶ್ವತ ಕ್ರಮಕ್ಕೆ ಸರಕಾರಕ್ಕೆ ಕೃಷಿಕರ ಒತ್ತಾಯ
ಸುಳ್ಯ: ಕಾಡಾನೆ ದಾಳಿ ಮತ್ತು ಇತರ ವನ್ಯ ಪ್ರಾಣಿಗಳ ಹಾವಳಿಯಿಂದ ಕೃಷಿ ನಾಶದಿಂದ ಕೃಷಿಕರು ಹೈರಾಣಾಗಿದ್ದಾರೆ. ಆದುದರಿಂದ ಆನೆ ಹಾಗೂ ಇತರ ವನ್ಯ ಪ್ರಾಣಿಗಳು ಕೃಷಿ ಭೂಮಿಗೆ ದಾಳಿ ಮಾಡಿ ಕೃಷಿ ಹಾನಿ ಮಾಡುವುದನ್ನು ತಡೆಯಲು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಕೃಷಿಕರು ಸರಕಾರವನ್ನು ಒತ್ತಾಯಿಸಿದರು.
ಸುಳ್ಯ ತಾಲೂಕು ಕೃಷಿಕ ಸಮಾಜ ಮತ್ತು ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು ವತಿಯಿಂದ ಸುಳ್ಯ ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆದ ವನ್ಯ ಪ್ರಾಣಿಗಳ ಹಾವಳಿ ತಡೆಗಟ್ಟಲು ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಕುರಿತು ಕೃಷಿಕರ ಸಮಾಲೋಚನಾ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು. ಕಾಡಾನೆಗಳು ಊರಿಗೆ ಬರುವುದನ್ನು ತಡೆಯಲು ಕಾಡಂಚಿನಲ್ಲಿ ಸೋಲಾರ್ ಬೇಲಿಗಳನ್ನು ಅಳವಡಿಸಬೇಕು, ಆನೆ ಬರುವ ಸ್ಥಳಗಳಲ್ಲಿ ಸೋಲಾರ್ ಲೈಟ್ ಹಾಕಬೇಕು ಸಣ್ಣ ಹಾಗೂ ಮಧ್ಯಮ ವರ್ಗದ ಕೃಷಿಕರ ತೋಟಗಳಿಗೆ ಸರಕಾರ ಉಚಿತವಾಗಿ ಬೇಲಿ ನಿರ್ಮಾಣ ಮಾಡಬೇಕು ಅಥವಾ ಸೋಲಾರ್ ಬೇಲಿ ನಿರ್ಮಾಣಕ್ಕೆ ನೀಡುವ ಸಹಾಯ ಧನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಆನೆ ಬರುವ ಕಡೆಗಳಲ್ಲಿ ಆನೆ ಕಂದಕ ನಿರ್ಮಾಣ ಹಾಗೂ ಇತರ ತಡೆಗಳನ್ನು ಹೆಚ್ಚು ನಿರ್ಮಾಣ ಮಾಡಬೇಕು, ಆನೆ ಮತ್ತಿತರ ವನ್ಯ ಪ್ರಾಣಿಗಳಿಗೆ ಆಹಾರ ನೀಡುವ ನಿಟ್ಟಿನಲ್ಲಿ ಅರಣ್ಯದಂಚಿನಲ್ಲಿ ಬಾಳೆ, ಹಣ್ಣಿನ ಗಿಡಗಳನ್ನು ಹೆಚ್ಚು ನೆಡಬೇಕು, ಇಲಾಖೆಯವರೇ ಈ ರೀತಿ ರೈತರ ಸಭೆಯನ್ನು ನಡೆಸಿ ಮಾಹಿತಿ ನೀಡಬೇಕು ಮತ್ತು ರೈತರಿಗೆ ಧೈರ್ಯ ತುಂಬಬೇಕು ಎಂದು ರೈತರು ಒತ್ತಾಯಿಸಿದರು.
ಎಲ್ಲಾ ರೀತಿಯ ಪ್ರಾಣಿಗಳು ಉಪಟಳ ಜಾಸ್ತಿಯಾಗಿದೆ. ಇದಕ್ಕೆ ಸಮಗ್ರ ಪರಿಹಾರ ಕಂಡುಕೊಳ್ಳಬೇಕು. ಕೃಷಿಕರಿಗೆ ಆದ ನಷ್ಟಕ್ಕೆ ಕೂಡಲೇ ಪರಿಹಾರ ಸಿಗುವಂತಾಗಬೇಕು ಮತ್ತು ಪರಿಹಾರ ಕಡಿತ ಮಾಡಬಾರದು ಎಂದು ಹೇಳಿದರು.
ಕೃಷಿಕರಾದ ಪುರುಷೋತ್ತಮ ಕಿರ್ಲಾಯ, ಗುಣವತಿ ಕೊಲ್ಲಂತ್ತಡ್ಕ, ಲೀಲಾವತಿ, ಪುಷ್ಪಾ ಮೇದಪ್ಪ,ಜಗನ್ನಾಥ ಜಯನಗರ, ಸಂದೀಪ್ ಮದುವೆಗದ್ದೆ, ಬಾಲಚಂದ್ರ ಕಲ್ಚರ್ಪೆ, ಸುದರ್ಶನ ಪಾತಿಕಲ್ಲು, ಕರುಣಾಕರ ಎ.ಜಿ., ಚೇತನ್ ಅಡ್ತಲೆ, ಶ್ರೀಹರಿ ಮಂಡೆಕೋಲು, ಶಿವಾನಂದ ಕುಕ್ಕುಂಬಳ, ಕಿಶೋರ್ ಕುಮಾರ್ ಉಳುವಾರು, ವಿನಯಕುಮಾರ್ ಕಂದಡ್ಕ ಮತ್ತಿತರರು ಸಲಹೆ ಸೂಚನೆಗಳನ್ನು ನೀಡಿದರು.
ಸುಳ್ಯ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ. ಕುಸುಮಾಧರ ಅಧ್ಯಕ್ಷತೆ ವಹಿಸಿದ್ದರು.
ಭಾರತೀಯ ಕಿಸಾನ್ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿಜಯಕುಮಾರ್, ಉಪಾಧ್ಯಕ್ಷ ಚಂದ್ರಾ ಕೋಲ್ಚಾರ್, ಭಾಕಿಸಂ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ರಾಯ, ಭಾಕಿಸಂ ಜಿಲ್ಲಾ ಕಾರ್ಯದರ್ಶಿ ರಾಮ್ ಪ್ರಸಾದ್ ಉಪಸ್ಥಿತರಿದ್ದರು. ಅಣ್ಣಾಜಿ ಗೌಡ, ಅವಿನಾಶ್ ಕುರುಂಜಿ, ನಾರಾಯಣ ಎಸ್.ಎಂ, ಕಿಶನ್ ಜಬಳೆ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.