
ಕಾರಿನಲ್ಲೇ ಮಹಿಳೆಗೆ ಪ್ರಥಮ ಹೆರಿಗೆ!
ಉಜಿರೆ: ಅಗತ್ಯ ಕೆಲಸದ ನಿಮಿತ್ತ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜಮಾಲ್ ಕರಾಯ ಅವರು ಹೆರಿಗೆ ಬೇನೆಯಿಂದ ಚಡಪಡಿಸುತ್ತಿದ್ದ ಮಹಿಳೆಯೊಬ್ಬರಿಗೆ ಸ್ಪಂದಿಸುವ ಮೂಲಕ ಅವರ ಕಾರಿನಲ್ಲೇ ಮಹಿಳೆಗೆ ಹೆರಿಗೆಯಾದ ಘಟನೆ ಜು.1 ರ ವೈದ್ಯರ ದಿನದಂದು ನಡೆದಿದೆ.
ಜಮಾಲ್ ಅವರ ಕಾರಿನಲ್ಲೇ ತನ್ನ ಚೊಚ್ಚಲ ಗಂಡು ಮಗುವಿಗೆ ಜನನವಾಗಿರುವ ಮಹಿಳೆ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು ಬೆಳ್ತಂಗಡಿ ಸಾರ್ವಜನಿಕ ಸಮುದಾಯ ಆಸ್ಪತ್ರೆಯಲ್ಲಿ ಆರೈಕೆಯಲ್ಲಿದ್ದಾರೆ.
ಸುನ್ನತ್‌ಕೆರೆ ನಿವಾಸಿ ಇಕ್ಬಾಲ್ ಅವರ ಪತ್ನಿ ತುಂಬು ಗರ್ಬಿಣಿ ಸಫಿಯಾ ಅಳದಂಗಡಿ ಅವರು ತೀವ್ರ ಹೆರಿಗೆ ನೋವಿನೊಂದಿಗೆ ರಸ್ತೆ ಬದಿ ನಿಂತುಕೊಂಡಿದ್ದರು. ಇದನ್ನು ಗಮನಿಸಿದ ಜಮಾಲ್ ಅವರು ತನ್ನ ಕಾರನ್ನು ತಿರುಗಿಸಿ ಬಂದು ವಿಚಾರಿಸಿದರು. ದಂಪತಿಯ ಸಂಕಷ್ಟ ಅರಿತ ಅವರು ತನ್ನ ಪ್ರಯಾಣ ಮೊಟಕುಗೊಳಿಸಿ ತಕ್ಷಣ ಮಹಿಳೆಯನ್ನು ತನ್ನ ಕಾರಿನಲ್ಲಿ ಕುಳ್ಳಿರಿಸಿ ಆಸ್ಪತ್ರೆಯತ್ತ ಪ್ರಯಾಣ ಬೆಳೆಸಿದರು. ಆದರೆ ಅದಾಗಲೇ ಸಫಿಯಾ ಅವರು ಕಾರಿನಲ್ಲೇ ಪ್ರಸವಿಸಿದ್ದಾರೆ.
ಪ್ರಸವದ ವೇಳೆ ಪತಿ ಇಕ್ಬಾಲ್ ಮತ್ತು ಜಮಾಲ್ ಮಹಿಳೆಗೆ ತುರ್ತು ಸ್ಪಂದಿಸಿದ್ದು, ಬಳಿಕ ಆಸ್ಪತ್ರೆಗೆ ಸೇರಿಸಿದ್ದಾರೆ. ಒಂದು ವೇಳೆ ಜಮಾಲ್ ಆ ಸಂದರ್ಭದಲ್ಲಿ ಬರದೇ ಹೋಗುತ್ತಿದ್ದರೆ ಅನಾಹುತ ಆಗುವ ಸಂಭವ ಕೂಡ ಇತ್ತು. ಅಂತೂ ವೈದ್ಯರ ದಿನದಂದು ಸಫಿಯಾ ಪಾಲಿಗೆ ತನ್ನ ಪತಿ ಮತ್ತು ಜಮಾಲ್ ಅವರೇ ವೈದ್ಯರಂತೆ ಬಂದು ಪ್ರಾಣ ಕಾಪಾಡಿದ್ದಂತೂ ಸತ್ಯ. ಜಮಾಲ್ ಅವರ ತುರ್ತು ಸ್ಪಂದನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.