
ಅಧಿಕಾರಿಗಳ ಗೈರಲ್ಲೇ ನಡೆದ ಕೋಟೆಕಾರು ಪ.ಪಂ. ಸಾಮಾನ್ಯ ಸಭೆ
ಉಳ್ಳಾಲ: ಪ್ರಮುಖ ಇಲಾಖೆಗಳ ಅಧಿಕಾರಿಗಳ ಗೈರಿನಿಂದಾಗಿ ಕಳೆದ ಶುಕ್ರವಾರದಂದು ಅರ್ಧದಲ್ಲೇ ಮೊಟಕುಗೊಂಡ ಕೋಟೆಕಾರು ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯು ಬುಧವಾರದಂದು ಮತ್ತೆ ಪ್ರಮುಖ ಅಧಿಕಾರಿಗಳ ಅನುಪಸ್ಥಿತಿಯಲ್ಲೇ ನಡೆದಿದೆ.
ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಮತ್ತು ಶಿಶು ಕಲ್ಯಾಣ ಇಲಾಖೆಯ ಇಬ್ಬರು ಅಧಿಕಾರಿಗಳು ಬಿಟ್ಟರೆ ಉಳಿದ ಪ್ರಮುಖ ಇಲಾಖೆಯ ಅಧಿಕಾರಿಗಳು ಗೈರಾಗಿದ್ದರು.
ಆಡಳಿತ ಬಿಜೆಪಿ ಪಕ್ಷದ ಸದಸ್ಯ ಸುಜಿತ್ ಮಾಡೂರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪಟ್ಟಣ ಪಂಚಾಯತ್ ಕಚೇರಿ ಎದುರಲ್ಲೇ ಇರುವ ಗ್ರಾಮ ಲೆಕ್ಕಾಧಿಕಾರಿಯು ಸಭೆಗೆ ಬಾರದೇ ಸಭೆ ನಡೆಸುವುದು ಬೇಡ ಎಂದು ಅಧ್ಯಕ್ಷರಲ್ಲಿ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ದಿವ್ಯ ಅವರು ಲೋಕೋಪಯೋಗಿ ಇಲಾಖೆಯವರು ಸಭೆಗೆ ಹಾಜರಾಗಲು ಸಾಧ್ಯವಿಲ್ಲವೆಂದು ತಿಳಿಸಿದ್ದು, ಜಟಿಲ ಸಮಸ್ಯೆಗಳನ್ನು ಪತ್ರದ ಮುಖೇನ ತಿಳಿಸಿ ಎಂದಿದ್ದಾರೆ. ಸಭೆಯನ್ನು ಮತ್ತೆ ಮೊಟಕು ಗೊಳಿಸಿದರೆ ನಷ್ಟದ ಜೊತೆಗೆ, ಪಟ್ಟಣ ಸದಸ್ಯರ ಸಮಯವೂ ವ್ಯರ್ಥ ಆಗುತ್ತದೆ ಎಂದರು.
ವಿಪಕ್ಷದ ಹಿರಿಯ ಸದಸ್ಯ ಅಹ್ಮದ್ ಬಾವ ಅಜ್ಜಿನಡ್ಕ ಮಾತನಾಡಿ ಪಂಚಾಯತಲ್ಲಿ ನೂತನ ಆಡಳಿತ ಬಂದ ಮೇಲೆ ಎಲ್ಲಾ ಸಾಮಾನ್ಯ ಸಭೆಯಲ್ಲೂ ಅಧಿಕಾರಿಗಳ ಗೈರಿನ ಬಗ್ಗೆಯೇ ಚರ್ಚೆಗಳಾಗುತ್ತಿದೆ.ಕೆಡಿಪಿ ಸಭೆಗಳಲ್ಲಿ ಅಧಿಕಾರಿಗಳ ಹಾಜರಾತಿ ಕಡ್ಡಾಯ. ಆದರೆ ಇಲ್ಲಿ ಅಧಿಕಾರಿಗಳ ಉಪಸ್ಥಿತಿ ಬೇಕೆ ಎಂಬುದರ ಬಗ್ಗೆ ಸ್ಪಷ್ಟತೆ ಬೇಕು. ಈ ಬಗ್ಗೆ ಪಂಚಾಯತ್ ಆಡಳಿತವು ಜಿಲ್ಲಾಧಿಕಾರಿಗಳಲ್ಲಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಸುಜಿತ್ ಅವರು ನಿಮ್ಮ ಕೆಲಸಗಳನ್ನು ಮಾಡಲು ನಿಮ್ಮದೇ ಶಾಸಕರಿದ್ದಾರೆ. ಪಟ್ಟಣ ವ್ಯಾಪ್ತಿಯ ಲೋಕೋಪಯೋಗಿ ರಸ್ತೆಗಳು ಕೆಟ್ಟು ಹೋಗಿವೆ. ಮೆಸ್ಕಾಂನ ವಿದ್ಯುತ್ ತಂತಿಗಳಿಗೆ ಮರಗಳು ಘರ್ಷಿಸುವ ಸಮಸ್ಯೆ ಬಗೆಹರಿಸಲು ಅರಣ್ಯ ಇಲಾಖೆಯವರು ಬೇಕು. ಮಳೆ ಹಾನಿಯಿಂದ ಉಂಟಾದ ನಷ್ಟ ಮತ್ತು ಪರಿಹಾರದ ಬಗ್ಗೆ ತಿಳಿಯಲು ಕಂದಾಯ ಅಧಿಕಾರಿಗಳು ಬೇಕು. ಇವರೆಲ್ಲ ಗೈರಾದರೆ ಸಮಸ್ಯೆಗಳನ್ನು ಬಗೆಹರಿಸುವವರಾರೆಂದು ಪ್ರಶ್ನಿಸಿದರು.
ಶಿಶು ಕಲ್ಯಾಣಾಧಿಕಾರಿಯನ್ನು ಉದ್ಧೇಶಿಸಿ ಮಾತನಾಡಿದ ಕೌನ್ಸಿಲರ್ ಅನಿತಾ ತನ್ನ ಒಂಭತ್ತನೇ ವಾರ್ಡ್‌ನಲ್ಲಿ ಅಂಗನವಾಡಿ, ಕೇಂದ್ರವು ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಕೇಂದ್ರಕ್ಕೆ ಸ್ವಂತ ಜಾಗ ಮಂಜೂರು ಮಾಡುವಂತೆ ಆಗ್ರಹಿಸಿದರು. ಕೌನ್ಸಿಲರ್ ಧೀರಜ್ ಮಾತನಾಡಿ, ಸ್ಥಳೀಯ ಪ್ರದೇಶದಲ್ಲಿ ಲೇ ಔಟ್ ನಿರ್ಮಾಣ ಮಾಡುತ್ತಿರುವವರು ಸರಕಾರದ ನಿಯಮದ ಪ್ರಕಾರ ಮೂರುವರೆ ಸೆಂಟ್ಸ್ ಜಾಗವನ್ನು ಅಂಗನವಾಡಿ ಕೇಂದ್ರಕ್ಕೆ ದಾನವಾಗಿ ನೀಡಲಿದ್ದು ಈ ಬಗ್ಗೆ ಪ್ರಕ್ರಿಯೆಗಳು ಪ್ರಗತಿಯಲ್ಲಿದೆ ಎಂದರು.
ಆರೋಗ್ಯಾಧಿಕಾರಿಯನ್ನುದ್ದೇಶಿಸಿ ಮಾತನಾಡಿದ ಕೌನ್ಸಿಲರ್ ಸಲೀಮ ಅವರು, ನಾಯಿ ಕಚ್ಚಿದರೆ ರ್ಯಾಬೀಸ್ ನಿರೋಧಕ ಲಸಿಕೆ ನೀಡಲು ಆಪತ್ಕಾಲಕ್ಕೆ ಕೋಟೆಕಾರು ಪಂಚಾಯತ್ ನೆರೆಯ ನಾಟೆಕಲ್ ಆರೋಗ್ಯ ಕೇಂದ್ರಕ್ಕೆ ಹೋದರೆ ಕೋಟೆಕಾರು ಆರೋಗ್ಯ ಕೇಂದ್ರಕ್ಕೆ ಹೋಗಿ ಎಂದು ಅಲೆದಾಡಿಸುತ್ತಾರೆಂದು ದೂರಿದರು.
ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಪ್ರವೀಣ್ ಐ. ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸುಳ್ಳೆಂಜೀರ್, ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು.