ಮಣ್ಣು ಮಾಫಿಯ ಕೆತ್ತಿಕಲ್ ಗುಡ್ಡವನ್ನು ಬಲಿ ಪಡೆದಿದೆ: ಸಂತೋಷ್ ಬಜಾಲ್

ಮಣ್ಣು ಮಾಫಿಯ ಕೆತ್ತಿಕಲ್ ಗುಡ್ಡವನ್ನು ಬಲಿ ಪಡೆದಿದೆ: ಸಂತೋಷ್ ಬಜಾಲ್


ವಾಮಂಜೂರು: ವಾಮಂಜೂರಿನ ಕೆತ್ತಿಕಲ್ ಪರಿಸರದಲ್ಲಿ ಕಳೆದ 25 ವರ್ಷಗಳ ಹಿಂದೆ ಭೂಕುಸಿತ ಉಂಟಾಗಿ ಹಲವಾರು ಮನೆಗಳಿಗೆ ಹಾನಿಯಾಗಿದ್ದು ಆಗಿನ ಸರಕಾರದ ಎಲ್ಲಾ ವರದಿಗಳು ಕೂಡ ಕೆತ್ತಿಕಲ್ ಪರಿಸರವನ್ನು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿದೆ. ಅದರಂತೆ ಇಲ್ಲಿ ಯಾವುದೇ ಕಾಮಗಾರಿಯನ್ನು ನಡೆಸುವಂತಿಲ್ಲ. ಆದರೆ ಜಿಲ್ಲಾಡಳಿತದ ನಿರ್ಲಕ್ಷ ಮತ್ತು ಜನಪ್ರತಿನಿಧಿಗಳ ದಿವ್ಯ ಮೌನದಿಂದಾಗಿ ಇಂದು ಕೆತ್ತಿಕಲ್ ಗುಡ್ಡವು ಭೂಮಾಫಿಯ ಮತ್ತು ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ಬಲಿಯಾಗಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಡಿವೈಎಫ್‌ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆರೋಪಿಸಿದರು.


ಅವರು ಇಂದು ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಡಿವೈಎಫ್‌ಐ ನೇತೃತ್ವದಲ್ಲಿ ವಾಮಂಜೂರು ಜಂಕ್ಷನ್ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.


ಕೇರಳದ ವೈನಾಡು ದುರಂತ ಮತ್ತು ಶಿರೂರಿನ ಗುಡ್ಡ ಕುಸಿತ ಪ್ರಕರಣದ ನಂತರದಲ್ಲಿ ಎಚ್ಚೆತ್ತುಕೊಂಡಾಗ ಬಹುತೇಕ ಗುಡ್ಡದ ಮಣ್ಣು ಕಬಳಿಸಿ ಕುಸಿಯುವ ಭೀತಿಗೆ ಬಂದು ತಲುಪಿತ್ತು. ಕೇರಳದ ವಯನಾಡ್‌ನಲ್ಲಿ ಮನೆ ಮಠ ಕಳೆದುಕೊಂಡ ಕುಟುಂಬಗಳಿಗೆ ಅಲ್ಲಿನ ಸರಕಾರ ಮನೆಗಳನ್ನು ಕಟ್ಟಿಕೊಡುವ ತಯಾರಿಯಲ್ಲಿದೆ. ಇಲ್ಲಿ ಒಂದು ವರುಷ ಕಳೆದರೂ ಒಕ್ಕಲೆಬ್ಬಿಸಿದ ಸಂತ್ರಸ್ತ ಕುಟುಂಬಗಳಿಗೆ ಸರಿಯಾದ ಪರಿಹಾರ ಕ್ರಮಗಳನ್ನು ವಿತರಿಸಲು ಈವರೆಗೂ ಕೈಗೊಂಡಿಲ್ಲ. ಇಲ್ಲಿನ ಸಂತ್ರಸ್ತ ಕುಟುಂಬಗಳ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದ್ದ ಸ್ಥಳೀಯ ಶಾಸಕರು ಮತ್ತು ಸಂಸದರುಗಳು ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂಬ ಹೆಸರನ್ನಿಡುವ ಧಾವಂತದಲ್ಲಿದ್ದಾರೆಯೇ ಹೊರತು ಜನರ ನೈಜ್ಯ ಬದುಕಿನ ಅರಿವು ಇವರಿಗೆ ಇಲ್ಲ ಎಂದರು.

ಮಂಗಳೂರಿನ ವಿಜಯ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಗುಜರಾತ್ ಮೂಲದ ಬ್ಯಾಂಕಿನೊಂದಿಗೆ ವಿಲೀನಗೊಂಡಾಗ ಮಾತನಾಡಲಿಲ್ಲ. ಜಿಲ್ಲೆಯ ಏರ್ಪೋರ್ಟ್ ಅದಾನಿ ತೆಕ್ಕೆಗೆ ಪಾಲಾದಾಗ ಮಾತನಾಡದ ಜನಪ್ರತಿನಿಧಿಗಳು ಜಿಲ್ಲೆಯ ಹೆಸರು ಬದಲಿಸಲು ಹೊರಟಿದ್ದಾರೆಯೇ ಹೊರತು ಈ ಜಿಲ್ಲೆಯ ಬಾಧಿತ ಸಮಸ್ಯೆಗಳ ಪರಿಹರಿಸುವಲ್ಲಿ ಕಾಳಜಿಯೇ ಇಲ್ಲದಿರುವುದು ಈ ನಾಡಿನ ದುರಂತ ಎಂದು ಹೇಳಿದರು.

ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಡಿವೈಎಪ್‌ಐನ ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ತಾರಿಗುಡ್ಡೆ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ವಾಮಂಜೂರು ಪ್ರದೇಶದ ಮದುವೆ, ಮುಂಜಿ ಗ್ರಹಪ್ರವೇಶಗಳಿಗೆ ಸುಳಿದಾಡುವ ಭರತ್ ಶೆಟ್ಟರಿಗೆ ವಾಮಂಜೂರಿನ ಜನರ ಸಮಸ್ಯೆಗಳು ಬೇಡವಾಗಿದೆ. ಜಿಲ್ಲೆಯ ಸಂಸದರು ಮತ್ತು ಶಾಸಕರುಗಳು ಧರ್ಮರಾಜಕಾರಣದ ಅಮಲಿನಿಂದ ಹೊರಬಂದು ಇಂತಹ ನೈಜ್ಯ ಸಮಸ್ಯೆಗಳ ಕುರಿತು ಎಚ್ಚೆತ್ತುಕೊಳ್ಳಬೇಕಿದೆ ಎಂದರು. 

ರೈತ ಮುಖಂಡರಾದ ಬಾಬುಸಾಲಿಯನ್ ಮಾತನಾಡಿ, ವಾಮಂಜೂರು ಅನೇಕ ಸಮಸ್ಯೆಗಳ ಆಗರವಾಗಿದೆ. ಇಲ್ಲಿ ಮಂಜೂರಾದ ಸ್ಮಶಾನವನ್ನು ಕೂಡ ಆಗದಂತೆ ಮಾಫಿಯಾಗಳು ನಿಯಂತ್ರಿಸುತ್ತಿವೆ ಎಂದರು.

ಪ್ರತಿಭಟನೆಯಲ್ಲಿ ಡಿವೈಎಫ್‌ಐ ವಾಮಂಜೂರ್ ಪ್ರದೇಶ ಸಮಿತಿಯ ಅಧ್ಯಕ್ಷರಾದ ದಿನೇಶ್ ಬೊಂಡಂತಿಲ, ಕಾರ್ಯದರ್ಶಿ ಚಂದ್ರಹಾಸ್ ತಾರಿಗುಡ್ಡೆ, ಮುಖಂಡರಾದ ಕೀರ್ತನ್ ಸಂಕೇಶಬೆಟ್ಟು, ನಿಶಾಂತ್ ಸಿಲ್ವರ್ ಕೊಡಿ, ಮಹೇಶ್ ಬೊಂಡಂತಿಲ, ಸತೀಶ್ ತಾರಿಗುಡ್ಡೆ ಕಾರ್ಮಿಕ ಮುಖಂಡರಾದ ಅಶೋಕ್ ಬಂಗೇರ ಹೊನ್ನಯ ಅಂಚನ್ ಭವಾನಿ ಗಂಗಯ ಅಮಿನ್, ಬಾಬು ಅನೆಬದಿ, ಹೊನ್ನಯ ಅಮೀನ್, ಗೋಪಾಲ ಮೂಲ್ಯ, ಶೇಖರ ಗಂಪ, ಮುಂಡಪ್ಪ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article