
ಕಂದಾವರ ಗ್ರಾ.ಪಂ. ಅವ್ಯವಹಾರ ಆರೋಪ
ಕಂದವಾರ: ಕಂದವಾರ ಗ್ರಾಮ ಪಂಚಾಯತ್‌ನ ಕೌಡೂರಿನ ಸರ್ವೆ ನಂ. 135/3ರಲ್ಲಿ ಸರಕಾರಿ ಕಾದಿರಿಸಲಾದ ಜಾಗದಲ್ಲಿ ಹಕ್ಕುಪತ್ರ ನೀಡಲಾದವರಿಗೆ ಮನೆ ಕಟ್ಟುವ ಕಾರ್ಯ ಹಾಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯ ನಡೆಸದೆ, ಮರು ಹಕ್ಕು ಪತ್ರ ನೀಡುವ ಮೂಲಕ ಜನರಿಗೆ ಮೋಸ ಮಾಡಲಾಗುತ್ತಿದೆ ಎಂದು ಗ್ರಾ.ಪಂ.ನ ಮಾಜಿ ಅಧ್ಯಕ್ಷೆ ವಿಜಯ ಗೋಪಾಲ ಆರೋಪಿಸಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2018ರಲ್ಲಿ ಸರಕಾರಿ ಜಾಗದಲ್ಲಿ 189 ಹಕ್ಕುಪತ್ರ ನೀಡಲಾಗಿತ್ತು. ಆದರೆ ಈವರೆಗೆ ಮನೆ ಕಟ್ಟಿ ನೀಡಿಲ್ಲ. ಹಿಂದೆ ಕೊಟ್ಟ ಹಕ್ಕು ಪತ್ರದ ಬದಲಿಗೆ ಈಗ ಮರು ಹಕ್ಕುಪತ್ರ ನೀಡುವ ಕಾರ್ಯದ ಮೂಲಕ ಕ್ಷೇತ್ರದ ಜನರಿಗೆ ಮೋಸ ಮಾಡಲಾಗುತ್ತಿದೆ ಎಂದರು.
ಕೊಳಂಬೆ ಗ್ರಾಪಂನಲ್ಲಿ ವಸತಿ ಸಮುಚ್ಚಯ ನಿರ್ಮಾಣವಾಗಿದ್ದು, ಅದರ ಎದುರಿನ ಸರಕಾರಿ ಜಾಗವನ್ನು ಬಂಡವಾಳಶಾಹಿಗಳ ಜತೆಗೂಡಿ ಖಾಸಗಿಯವರಿಗೆ ನೀಡುವ ಹುನ್ನಾರವೂ ನಡೆಯುತ್ತಿದೆ. ಪಂಚಾಯತ್ಗೆ ಆದಾಯ ಬರುವ ವ್ಯವಸ್ಥೆ ಮಾಡುವುದನ್ನು ಬಿಟ್ಟು ಸರಕಾರಿ ಜಾಗ ಅತಿಕ್ರಮಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಬಗ್ಗೆ ಪಂಚಾಯತ್ನ ಸಾಮಾನ್ಯ ಸಭೆಯಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ. ಸಭೆಯ ವೇಳೆ ಅಧ್ಯಕ್ಷರನು ಬೆಂಬಲಿಸುವ ವ್ಯಕ್ತಿ ವೀಡಿಯೋ ಮಾಡಿ ವೈರಲ್ ಮಾಡುವ ಕೃತ್ಯ ನಡೆಯುತ್ತಿದೆ. ಕೊಳಂಬೆ ಗ್ರಾಮದ ಉಳ್ಳಾಗಡ್ಡೆ ಎಂಬಲ್ಲಿ ನೀರು ಬರುತ್ತಿಲ್ಲ ಎಂದು ಹಲವು ಸಮಯದಿಂದ ದೂರು ನೀಡಿದ್ದರೂ ಸಮಸ್ಯೆ ಬಗೆಹರಿಸಲಾಗಿಲ್ಲ. ಬದಲಾಗಿ ಅಲ್ಲಿನ ಜನರು ಪರಸ್ಪರ ಹೊಡೆದಾಟ ನಡೆಸಿ ಎಫ್‌ಐಆರ್ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಕಂದಾವರ ಗ್ರಾ.ಪಂ. ದುರಾಡಳಿತದ ಆಗರವಾಗಿದೆ. ಇಲ್ಲಿನ ದುರಾಡಳಿತದ ಬಗ್ಗೆ ಜಿಪಂ ಸಿಇಒ, ತಾಪಂ ಇಒಗೂ ದೂರು ನೀಡಲಾಗಿದೆ ಎಂದು ಅವರು ಹೇಳಿದರು.
ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಜಿಪಂ ಮಾಜಿ ಸದಸ್ಯ ಯು.ಪಿ. ಇಬ್ರಾಹೀಂ, ಸುನಿತಾ ಅದ್ಯಪಾಡಿ, ಮಾಲತಿ ಉಪಸ್ಥಿತರಿದ್ದರು.