ಬ್ರಹ್ಮಕುಮಾರೀಸ್ ಮಂಗಳೂರು ಕೇಂದ್ರದಲ್ಲಿ ರಕ್ತದಾನ ಶಿಬಿರ
ಸಂಸ್ಥೆಯ ಪೂರ್ವ ಮುಖ್ಯ ಆಡಳಿತಾಧಿಕಾರಿಣಿ ರಾಜಯೋಗಿನಿ ದಾದಿ ಪ್ರಕಾಶಮಣಿಜಿ ಅವರ 18ನೇ ಪುಣ್ಯ ತಿಥಿ ಅಂಗವಾಗಿ ವಿಶ್ವ ಭ್ರಾತೃತ್ವ ದಿನ ಆಚರಿಸಲಾಗುತ್ತಿದ್ದು ಅಗಸ್ಟ್ 22ರಿಂದ 25ರವರೆಗೆ ಬ್ರಹತ್ ರಕ್ತದಾನ ಅಭಿಯಾನ ನಡೆಯಲಿದೆ. ಒಟ್ಟು 100 ಗಂಟೆಗಳಲ್ಲಿ 1 ಲಕ್ಷ ಯೂನಿಟ್ ರಕ್ತ ಸಂಗ್ರಹಿಸಿ ಅದನ್ನು ಸಾರ್ವಜನಿಕ ಆರೋಗ್ಯಕ್ಕಾಗಿ ನೀಡುವ ಗುರಿ ಹೊಂದಿದ್ದು, ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆದ ಈ ಶಿಬಿರದಲ್ಲಿ ವಿವಿಧ ವಲಯಗಳಿಂದ ಬಂದ ದಾನಿಗಳು ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮವನ್ನು ಮುಖ್ಯ ಅತಿಥಿ ದ.ಕ. ಜಿಲ್ಲಾ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷ ಸಿಎ ಶಾಂತರಾಮ್ ಶೆಟ್ಟಿ, ಸೇಂಟ್ ಡೊಮಿನಿಕ್ ಚರ್ಚ್‌ನ ಸಹಾಯಕ ಪ್ಯಾರಿಶ್ ಪಾದ್ರಿ ಫಾ. ಮ್ಯಾಕ್ನಝಿ ಮೆಂಡೊಂಝಾ, ಕಾವೂರು ಗಾಂಧಿನಗರದ ಆದಿಚುಂಚನಗಿರಿ ಮಠದ ಮ್ಯಾನೇಜರ್ ಸುಬ್ಬ ಕರಡ್ಕ ಅವರುಗಳು ಉದ್ಘಾಟಿಸಲಾಯಿತು.
ಬಳಿಕ ಸಿಎ ಶಾಂತರಾಮ್ ಶೆಟ್ಟಿ ಮಾತನಾಡಿ, ಸಮಾಜದ ಹಿತಕ್ಕಾಗಿ, ಜನರಲ್ಲಿ ಸೇವಾಭಾವನೆ ಬೆಳೆಸುವಂತಹ ಮಾನವೀಯ ಕಾರ್ಯಗಳನ್ನು ಬ್ರಹ್ಮಕುಮಾರೀಸ್ ಸಂಸ್ಥೆ ಸದಾ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮವನ್ನು ಮಂಗಳೂರಿನ ಬ್ರಹ್ಮಕುಮಾರೀಸ್‌ನ ಕೇಂದ್ರಪ್ರಮುಖರಾದ ಬಿ.ಕೆ. ವಿಶ್ವೇಶ್ವರಿ ಅವರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ, ‘ರಕ್ತದಾನವೆಂಬುದು ಮಾನವೀಯ ಸೇವೆಯ ಅತ್ಯುನ್ನತ ಕರ್ಮ. ಇದು ಜೀವ ಉಳಿಸುವುದಲ್ಲದೆ, ಮಾನವೀಯತೆ, ಪ್ರೀತಿ ಮತ್ತು ಸಹೋದರತ್ವದ ಸಂದೇಶವನ್ನು ಹರಡುವುದಾಗಿದೆ’ ಎಂದು ಹೇಳಿದರು.
ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ವೈದ್ಯಕೀಯ ಸಿಬ್ಬಂದಿಗಳು ಶಿಸ್ತುಬದ್ಧ ಹಾಗೂ ಸ್ವಚ್ಛತೆಯ ನಿಯಮಗಳನ್ನು ಪಾಲಿಸಿ ರಕ್ತ ಸಂಗ್ರಹ ಕಾರ್ಯ ನಡೆಸಿದರು. ಅನೇಕರು ಸ್ವಯಂಪ್ರೇರಿತರಾಗಿ ಮುಂದೆ ಬಂದು ರಕ್ತದಾನ ಮಾಡಿದರು.
ಆಪ್ತ ಸಮೋಲೋಚಕಿ ರೇವತಿ ಸನಿಲ್ ಸ್ವಾಗತಿಸಿ, ಬಿ.ಕೆ. ಅಂಬಿಕಾ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದಲ್ಲಿ 62 ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು. ಶಿಬಿರದಲ್ಲಿ ಭಾಗವಹಿಸಿದ ದಾನಿಗಳಿಗೆ ಆಹಾರ ಪಾನೀಯಗಳು ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.