ಲಕ್ಕಿ ಸ್ಕೀಮ್ ಹೆಸರಿನಲ್ಲಿ ವಂಚನೆ: ಇಬ್ಬರ ಬಂಧನ
ಮಂಗಳೂರಿನ ಸುರತ್ಕಲ್ನ ಕಾಟಿಪಳ್ಳ ನಿವಾಸಿಗಳಾದ ಅಹಮ್ಮದ್ ಖುರೇಶಿ (34) ಹಾಗೂ ನಝೀರ್ ಯಾನೆ ನಾಸೀರ್ (39) ಬಂಧಿತ ಆರೋಪಿಗಳು.
ಪ್ರಕರಣದ ವಿವರ:
ನ್ಯೂ ಶೈನ್ ಎಂಟರ್ ಪ್ರೈಸಸ್ ಎಂಬ ಲಕ್ಕಿ ಸ್ಕೀಮ್ನಲ್ಲಿ 9 ತಿಂಗಳು 1000ದಂತೆ ಹಾಗೂ ಕೊನೆಯ 2 ತಿಂಗಳು 1500 ರೂ.ನಂತೆ 11 ತಿಂಗಳ ಅವಧಿಗೆ ದುಡ್ಡನ್ನು ಸ್ವೀಕರಿಸಿ 11 ತಿಂಗಳ ಲಕ್ಕಿ ಸ್ಕೀಮ್ನ ಹೆಸರಿನಲ್ಲಿ ಆಕರ್ಷಕ ಬಹುಮಾನ, ಬಂಪರ್ ಬಹುಮಾನಗಳಾದ ಕಾರು, ಬೈಕು, ಪ್ಲಾಟ್, ಸೈಟ್, ಚಿನ್ನದ ಉಂಗುರಗಳು ಮತ್ತು ನಗದುಗಳನ್ನು ಲಕ್ಕಿ ಡ್ರಾನಲ್ಲಿ ಸಿಕ್ಕಿದವರಿಗೆ ಇವುಗಳನ್ನು ಕೊಡುವುದಾಗಿ ತಿಳಿಸಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸುಮಾರು 4.20 ಕೋಟಿಗೂ ಅಧಿಕ ಹಣವನ್ನು ೩ ಸಾವಿರ ಜನರು ಪಾವತಿಸಿದ್ದು, ಲಕ್ಕಿ ಸ್ಕೀಮ್ ಕಂತು ಮುಗಿದ ನಂತರ ಡೆಪಾಸಿಟ್ ಮಾಡಿದ ಹಣ ಹಾಗೂ ಸರಿಯಾದ ಬಹುಮಾನಗಳನ್ನು ನೀಡದೇ ಮತ್ತು ಎಲ್ಲರಿಗೂ ಹಣವನ್ನು ನೀಡುತ್ತೇವೆ ಎಂದು ಆಶ್ವಾಸನೆ ನೀಡಿ, ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ಸರ್ಕಲ್ ಬಳಿ ಇರುವ ಆಯಿಷಾ ಕಟ್ಟಡದಲ್ಲಿರುವ ನ್ಯೂ ಶೈನ್ ಎಂಟರ್ ಪ್ರೈಸಸ್ ಕಚೇರಿಯನ್ನು ಏಕಾಏಕಿಯಾಗಿ ಬಂದ್ ಮಾಡಿ ಸಾರ್ವಜನಿಕರಿಗೆ ಆಸೆ ಹುಟ್ಟಿಸಿ ವಂಚಿಸಿರುವುದಾಗಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಆ.16 ರಂದು ಪ್ರಕರಣ ದಾಖಲಾಗಿದೆ.
ಆ.19 ರಂದು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಆ.25ರ ವರೆಗೆ ಹೆಚ್ಚಿನ ತನಿಖೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ತನಿಖೆಯಲ್ಲಿ ವಫಾ ಎಂಟರ್ ಪ್ರೈಸಸ್ ಲಕ್ಕಿ ಸ್ಕೀಂನ ಅಬ್ದುಲ್ ವಹಾಬ್ ಮತ್ತು ಬಶೀರ್ ಇವರೊಂದಿಗೆ ಸೇರಿ ಈ ಹಿಂದೆ ನಡೆಸಿರುವ ಲಕ್ಕಿ ಸ್ಕೀಮ್ನ ಯೋಜನೆಗಳ ಬಗ್ಗೆ ಕೂಡ ತನಿಖೆಯನ್ನು ಮಾಡಲಾಗುತ್ತಿದೆ.
ಈಗಾಗಲೇ ಆರೋಪಿ ಅಹಮ್ಮದ್ ಖುರೇಶಿ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2 ಕೊಲೆಯತ್ನ ಪ್ರಕರಣಗಳು ಮತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಸರಕಾರಿ ನೌಕರನಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ 1 ಪ್ರಕರಣ ದಾಖಲಾಗಿರುತ್ತದೆ. ಆರೋಪಿ ನಝೀರ್ ಯಾನೆ ನಾಸೀರ್ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 1 ಕೊಲೆಯತ್ನ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯಿಷಾ ಕಾಂಪ್ಲೆಕ್ಸ್ನ ಕಚೇರಿ, ಬಿ.ಎಂ.ಆರ್ ಕಾಂಪ್ಲೆಕ್ಸ್ನ ಕಚೇರಿ ಹಾಗೂ ಶೈನ್ ಮಾರ್ಟ್ ಕಚೇರಿಯಲ್ಲಿ ಕೃತ್ಯಕ್ಕೆ ಉಪಯೋಗಿಸಿದ ಕಂಪ್ಯೂಟರ್ ಉಪಕರಣಗಳು, ಡ್ರಾ ಕಾಯಿನ್, ಲಕ್ಕಿ ಡ್ರಾ ಪೆಟ್ಟಿಗೆ, ರಿಜಿಸ್ಟರ್ಗಳು, ಡಿವಿಆರ್ಗಳನ್ನು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಆರೋಪಿತರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು, ಚಿನ್ನಾಭರಣಗಳ ಖರೀದಿ, ನಿವೇಶನ, ವಾಹನ ಖರೀದಿ, ಮನೆ, ಕಚೇರಿಯಲ್ಲಿದ್ದ ಕಂಪ್ಯೂಟರ್ ಉಪಕರಣಗಳನ್ನು ಹಾಗೂ ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಆರೋಪಿತರು ಲಕ್ಕಿ ಸ್ಕೀಮ್ನ ಹಣದಲ್ಲಿ ಖರೀದಿಸಿದ ಮನೆ, ನಿವೇಶನ, ಪ್ಲಾಟ್, ವಾಹನಗಳು, ಚಿನ್ನಾಭರಣಗಳು ಹಾಗೂ ಇನ್ನಿತರ ವಸ್ತುಗಳ ಜಪ್ತಿ ಮಾಡಲು ಜಿಲ್ಲಾಧಿಕಾರಿಯವರಿಗೆ, ಉಪ ವಿಭಾಗ ದಂಡಾಧಿಕಾರಿಯವರಿಗೆ, ಕಂದಾಯ ಇಲಾಖೆಯವರಿಗೆ ಪತ್ರ ವ್ಯವಹಾರವನ್ನು ಮಾಡಲಾಗಿರುತ್ತದೆ.
ಕಾರ್ಯಚರಣೆಯಲ್ಲಿ ಸುರತ್ಕಲ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ. ಅವರ ನೇತೃತ್ವದಲ್ಲಿ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ರಘುನಾಯಕ, ರಾಘವೇಂದ್ರ ನಾಯ್ಕ್, ಜನಾರ್ಧನ ನಾಯ್ಕ್, ಶಶಿಧರ ಶೆಟ್ಟಿ, ಎಎಸ್ಐರವರಾದ ರಾಧಾಕೃಷ್ಣ, ಸುಕೇತ್ ಜಿ. ಕೋಟ್ಯಾನ್ ಹಾಗೂ ಸಿಬ್ಬಂದಿಯವರಾದ ಅಣ್ಣಪ್ಪ, ಉಮೇಶ್, ನಾಗರಾಜ್, ಸತೀಶ್ ಸತ್ತಿಗೇರಿ, ಮಹೇಶ್ ಎನ್., ಶಫೀವುಲ್ಲಾ ಸನತಾಯಿ, ದೇವರಾಜ್, ಸುನೀಲ್ ಕುಸನಾಳ ಭಾಗವಹಿಸಿದ್ದರು.