ಗಾಯಗೊಂಡ ಜಿಂಕೆ ಪತ್ತೆ
Friday, August 22, 2025
ಉಜಿರೆ: ಆ.22 ರಂದು ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಹುಣ್ಸೆಕಟ್ಟೆಯಲ್ಲಿ ಜಿಂಕೆಯೊಂದು ಗಾಯವಾಗಿ ಬಿದ್ದಿದ್ದು, ಅರಣ್ಯ ಇಲಾಖಾ ಸಿಬ್ಬಂದಿಗಳು ಕ್ಲಪ್ತ ಸಮಯದಲ್ಲಿ ಧಾವಿಸಿ ಮುಂದಿನ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಯಿತು.
ನಾಯಿಗಳ ಕಾಟದಿಂದ ಈ ಘಟನೆ ಸಂಭವಿಸಿದ್ದೆನ್ನಲಾಗಿದ್ದು, ನಾಯಿಗಳು ಕಾಡಿನಿಂದ ಅಟ್ಟಾಡಿಸಿಕೊಂಡು ಬಂದು ನಾರಾಯಣ ಪೂಜಾರಿ ಅವರ ಮನೆಯ ಸಮೀಪವಿರುವ ಬಟ್ಟೆ ಒಗೆಯುವ ಕಲ್ಲಿಗೆ ತಾಗಿ ಗಾಯಗೊಂಡಿದೆ. ಘಟನೆಯ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಧಾವಿಸಿ ಜಿಂಕೆಯನ್ನು ಚಿಕಿತ್ಸೆಗೆ ರವಾನಿಸಿದ್ದಾರೆ. ಹಲವು ದಿನಗಳಿಂದ ಈ ಭಾಗದಲ್ಲಿ ಬೀದಿ ನಾಯಿಗಳಿಂದ ಊರಿನವರಿಗೆ ಮತ್ತು ಕಾಡು ಪ್ರಾಣಿಗಳಿಗೂ ಸಮಸ್ಯೆ ಆಗುತ್ತಿದೆ.
೧೫ಕ್ಕಿಂತ ಹೆಚ್ಚು ನಾಯಿಗಳು ಈ ಪ್ರದೇಶದಲ್ಲಿದ್ದು, ಶಾಲೆಗೆ ತೆರಳುವ ಮಕ್ಕಳನ್ನು ಅಟ್ಟಾಡಿಸಿಕೊಂಡು ಹೋಗುತ್ತಿದ್ದು, ಪಾದಾಚಾರಿಗಳು, ಮಕ್ಕಳು ಭಯದಿಂದ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರ ಪಂಚಾಯತ್ ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ