ಪ್ರಕರಣ ಹಿಂಪಡೆಯುವೆ ಎಂದ ಸುಜಾತ ಭಟ್: ಅನನ್ಯಾ ಭಟ್ ಪ್ರಕರಣಕ್ಕೆ ತಿರುವು
ಮಂಗಳೂರು: ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆ ಎಂದು ಹೇಳಿ ದ. ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಲಿಖಿತ ದೂರು ನೀಡಿರುವ ಸುಜಾತ ಭಟ್ ನೀಡುತ್ತಿರುವ ಗೊಂದಲಕಾರಿ ಹೇಳಿಕೆ ಒಟ್ಟು ಪ್ರಕರಣದ ಕುರಿತು ಅನುಮಾನ ಮೂಡಿಸುತ್ತಿರುವಾಗಲೇ ಇದೀಗ ಸುಜಾತಾ ಭಟ್ ತಾನು ಪ್ರಕರಣ ವಾಪಾಸ್ ಪಡೆಯುತ್ತಿರುವುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದ್ದು ಸುಜಾತಾ ಭಟ್ ನಡೆ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.
ಅನನ್ಯಾ ಭಟ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್‌ಐಟಿ ಪ್ರಕರಣದ ವಿವರ ನೀಡುವಂತೆ ಸುಜಾತ ಭಟ್‌ಗೆ ನೋಟಿಸ್ ನೀಡಿದೆ. ಆದರೆ ಎಸ್‌ಐಟಿ ನೋಟಿಸ್‌ಗೆ ಸುಜಾತ ಭಟ್ ಉತ್ತರಿಸಿಲ್ಲ ಎನ್ನಲಾಗಿದೆ. ಬದಲಾಗಿ ಅವರದ್ದೇ ಧ್ವನಿಯದ್ದು ಎನ್ನಲಾದ ಆಡಿಯೋ ಹರಿಯಬಿಟ್ಟು ಪ್ರಕರಣ ವಾಪಾಸ್ ಪಡೆಯುವುದಾಗಿ ಹೇಳಿದ್ದಾರೆ. ಆದರೆ ಪ್ರಕರಣ ಹಿಂಪಡೆಯುವ ಬಗ್ಗೆ ಎಸ್‌ಐಟಿಗೆ ಮಾಹಿತಿ ನೀಡಿಲ್ಲ ಎನ್ನಲಾಗಿದೆ.
ಸುಜಾತ ಭಟ್‌ಗೆ ಮಗಳಿರಲು ಸಾಧ್ಯವಿಲ್ಲ: ಸಹೋದರ
ಸುಜಾತ ಭಟ್ ಸಹೋದರ ಎನ್ನಲಾದ ಉಡುಪಿಯ ವ್ಯಕ್ತಿಯೊಬ್ಬರು ಸುಜಾತ ಭಟ್‌ಗೆ ಅನನ್ಯಾ ಭಟ್ ಎಂಬ ಮಗಳು ಇರಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ತನ್ನ ಹೆಸರು, ಗುರುತನ್ನು ಗೌಪ್ಯವಾಗಿಡಲು ಬಯಸಿರುವ ಸುಜಾತ ಭಟ್ ಸಹೋದರ ಉಡುಪಿಯಲ್ಲಿ ಖಾಸಗಿ ದೃಶ್ಯವಾಹಿನಿಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ, ಸುಜಾತ ಭಟ್ ಒಂಭತ್ತನೇ ತರಗತಿಯಲ್ಲಿ ಓದುತ್ತಿರುವಾಗಲೇ ಮನೆ ಬಿಟ್ಟು ಹೋಗಿದ್ದರು, ನಂತರ ಆಕೆಯನ್ನು ಕರೆದುಕೊಂಡು ಬಂದಾಗ ಬಸುರಿಯಾಗಿದ್ದು, ತಂದೆ ಗರ್ಭಪಾತ ಮಾಡಿಸಿದ್ದರು. ಆಕೆ ನಮ್ಮ ಕುಟುಂಬದ ಜೊತೆ ಸಂಪರ್ಕದಲ್ಲಿಲ್ಲ. ಶಿವಮೊಗ್ಗದ ರಿಪ್ಪನ್ ಪೇಟೆಯಲ್ಲಿ ಯಾರದ್ದೋ ಜತೆಗಿದ್ದೇನೆ ನಂತರ ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗಿ ಈಗ ನೆಲೆಸಿದ್ದೇನೆ ಎಂದಿದ್ದಳು. ಕಳೆದ 40 ವರ್ಷದಲ್ಲಿ ಎರಡು ಮೂರು ಬಾರಿ ಮಾತ್ರ ಉಡುಪಿಗೆ ಬಂದಿದ್ದಾಳೆ. ಎರಡು ಬಾರಿ ಚಾಲಕನ ಜೊತೆ ಕಾರಿನಲ್ಲಿ ಉಡುಪಿಗೆ ಬಂದಿದ್ದಳು. ನಾನೀಗ ಕೋಟ್ಯಾಧೀಶೆ ಎನ್ನುತ್ತಿದ್ದಳು. ಮದುವೆಯಾಗಿರುವ ಬಗ್ಗೆ, ಮಗಳು ಇರುವ ಬಗ್ಗೆ ಒಂದು ಬಾರಿಯೂ ನಮ್ಮ ಬಳಿ ಹೇಳಿಲ್ಲ ಸುಜಾತ ಭಟ್ ಪತಿ ಎನ್ನಲಾದ ಅನಿಲ್ ಭಟ್ ಯಾರೆಂದು ನಮಗೆ ಗೊತ್ತಿಲ್ಲ. ರಂಗಪ್ರಸಾದ್ ಬಗ್ಗೆಯೂ ನಮಗೆ ಮಾಹಿತಿ ಇಲ್ಲ. ಎಸ್‌ಐಟಿ ಮುಂದೆ ತನಿಖೆಗಾಗಿ ಹೇಳಿಕೆ ಕೊಡಲು ನಾನು ಸಿದ್ಧ. ಎಂದಿದ್ದಾರೆ.
ಸತ್ಯವೆಂದು ನಂಬಿದ್ದೆವು..
ಸುಜಾತ ಭಟ್ ಹೇಳಿದ ಸುಳ್ಳುಗಳನ್ನು ನಾವು ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಸತ್ಯವೆಂದು ನಂಬಿದ್ದೆವು ಎಂದು ಹೋರಾಟಗಾರ ಜಯಂತ್ ಹೇಳಿದ್ದಾರೆ.
ಸುಮಾರು ಎರಡು ವರ್ಷಗಳ ಹಿಂದೆ ಸುಜಾತ ಭಟ್ ಈಗ ಮಾಧ್ಯಮಗಳ ಮುಂದೆ ಹೇಳುತ್ತಿರುವ ವಿಷಯವನ್ನೇ ತಮ್ಮ ಮುಂದೆ ಹೇಳಿಕೊಂಡರು. ಪಾಪ ವಯಸ್ಸಾದ ಮಹಿಳೆ ಎಂದು ನಾವು ಸಹಾಯಕ್ಕೆ ನಿಂತೆವು. ಮಗಳ ವಿಷಯದಲ್ಲಿ ದಾಖಲೆಗಳನ್ನು ತಂದುಕೊಡಿ ಎಂದು ಕೇಳಿದಾಗ ಅವರು ಉಡುಪಿ ಮತ್ತು ಎಲ್ಲೆಲ್ಲೋ ಸುತ್ತಿದರೆ ಹೊರತು ದಾಖಲೆ ಕೊಡಲಿಲ್ಲ ಎಂದು ಜಯಂತ್ ಹೇಳಿದ್ದಾರೆ.