ಎಸ್‌ಸಿ, ಎಸ್‌ಟಿ ಅನುದಾನ ದುರುಪಯೋಗ: ತೆಂಕಮಿಜಾರು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆರೋಪ

ಎಸ್‌ಸಿ, ಎಸ್‌ಟಿ ಅನುದಾನ ದುರುಪಯೋಗ: ತೆಂಕಮಿಜಾರು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆರೋಪ


ಮೂಡುಬಿದಿರೆ: ಎಸ್‌ಸಿ, ಎಸ್‌ಟಿಗೆ ಮೀಸಲಾಗಿಟ್ಟಿರುವ ಅನುದಾನವನ್ನು ದುರುಪಯೋಗ ಪಡಿಸಲಾಗಿದೆ. ಕೊಲತ್ತಾರು ಪದವಿನಲ್ಲಿ ಅನುಮತಿ ಇಲ್ಲದೆ ಗಣಿಗಾರಿಕೆ ಹಾಗೂ ವಿದ್ಯುತ್ ಸಂಪಕ೯ ನೀಡಿರುವ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ತೆಂಕಮಿಜಾರು ಗ್ರಾಮಸಭೆಯಲ್ಲಿ ನಡೆದಿದೆ.


ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ. ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಮಾತನಾಡಿದ ಗ್ರಾಮಸ್ಥ ಪ್ರಶಾಂತ್ ಜೋಗಿ ಅವರು ಪೂಮಾವರ ಪದವಿನಲ್ಲಿ ಎಸ್.ಸಿ., ಎಸ್‌ಟಿ ಸಮುದಾಯದ ಮನೆಗಳಿಲ್ಲ ಆದರೆ ಅಲ್ಲಿ ಅವರ ಅಭಿವೃದ್ಧಿಗಾಗಿ ಮೀಸಲಾಗಿಟ್ಟಿರುವ ಅನುದಾನವನ್ನು ಬಳಸಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಗ್ರಾ.ಪಂ.ನ ಮಾಜಿ ಸದಸ್ಯ ಶಶಿಕಾಂತ್ ಶೆಟ್ಟಿಗಾರ್ ಎಸ್.ಸಿ. ಎಸ್.ಟಿ ಅನುದಾನವನ್ನು ದುರುಪಯೋಗಪಡಿಸಲಾಗಿದ್ದು ಇದಕ್ಕೆ ಸಂಬಂಧಪಟ್ಟವರು ಉತ್ತರಿಸಬೇಕು ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.


ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆಗೆ ನಿರಕ್ಷೇಪಣಾ ಪತ್ರ ನೀಡಿಲ್ಲ, ತಹಸೀಲ್ದಾರರ ಮೂಲಕ ಪಡೆದಿದ್ದಾರೆ. ಎಲ್ಲಿಯೂ ಸರ್ಕಾರಿ ಭೂಮಿಯಲ್ಲಿ ಗಣಿಗಾರಿಕೆಗೆ ಪಂಚಾಯತ್ ಅವಕಾಶ ನೀಡದಂತೆ ನಿರ್ಣಯ ಕೈಗೊಳ್ಳಲಾಯಿತು. ಜನ ಸಾಮಾನ್ಯರು ಕರೆಂಟ್ ಸಂಪರ್ಕ ಕೇಳಿದಾಗ ಸಾವಿರ ದಾಖಲೆ ಕೇಳುತ್ತೀರಿ, ಗಣಿಗಾರಿಕೆಗೆ ಹೇಗೆ ವಿದ್ಯುತ್ ಸಂಪರ್ಕ ನೀಡಿದಿರಿ ಎಂಬ ಗ್ರಾಮಸ್ಥರ ಪ್ರಶ್ನೆಗೆ ತಹಸೀಲ್ದಾರರು ನೀಡಿರುವ ನಿರಕ್ಷೇಪನಾ ಪತ್ರದ ಆದಾರದಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.

9/11 ಸಮರ್ಪಕ ದಾಖಲಾತಿ ಇಲ್ಲದೆ ಸಾಲ ಡಿಲೀಟ್ ಮಾಡಿ ಕರ್ತವ್ಯ ಲೋಪ ಮಾಡಿದ ಆರೋಪಗಳು ಕೇಳಿಬರುತ್ತಿದೆ. ಇದು ಸೂಕ್ತ ರೀತಿಯಲ್ಲಿ ತನಿಖೆಯಾಗಿ ಲೋಪವೆಸಗಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದಾಗ ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಶಾಲಿನಿ ಅವರು ಹಿಂದೆ ಲೋಪವಾಗಿರುವುದು ಹೌದು, ಅದಕ್ಕೆ ಸಮರ್ಪಕ ಕ್ರಮ ಕೈಗೊಳ್ಳಲಾಗಿದ್ದು ಈಗ ಸರಿಯಾಗಿದೆ ಯಾವುದೇ ಗೊಂದಲವಿಲ್ಲವೆಂದು ಉತ್ತರಿಸಿದಾಗ ಲೋಪವಾಗಿದ್ದರೆ ಅದನ್ನು ತಾ. ಪಂಚಾಯತ್ ವಿಚಾರಣೆ ಮಾಡಿ ಕ್ರಮಕೈಗೊಳ್ಳುತ್ತದೆ ಎಂದು ನೋಡಲ್ ಅಧಿಕಾರಿ ತಿಳಿಸಿದರು.

ಹಿರಿಯ ಕೃಷಿಕ ಅಲ್ಫೋನ್ಸ್ ಡಿಸೋಜ ಮಾತನಾಡಿ, ಉಡುಪಿ-ಕಾಸರಗೋಡು ವಿದ್ಯುತ್ ಸಂಪರ್ಕ ಟವರ್‌ಗಳನ್ನು ನಿರ್ಮಿಸಲಾಗುತ್ತಿದೆ. ಕೃಷಿಕರು ತೀವ್ರ ತೊಂದರೆಗೆ ಒಳಗಾಗುತ್ತಿದ್ದಾರೆ ಹಾಗೂ ನಾವು ಬೆಳೆದಂತಹ ಕೃಷಿಯನ್ನು ಹಾನಿ ಮಾಡಿ ಈ ಟವರ್‌ಗಳನ್ನು ನಿರ್ಮಿಸುತ್ತಿದ್ದಾರೆ. ಇದಕ್ಕೆ ಕೃಷಿಕರ ಒಪ್ಪಿಗೆ ಇರುವುದಿಲ್ಲ ಎಂಬುದಾಗಿ ಕೃಷಿಕರು ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಗಣಿ ಇಲಾಖೆಯವರು, ತಹಸೀಲ್ದಾರರು ಹಾಗೂ ಇತರ ಕೆಲ ಅಧಿಕಾರಿಗಳು ಗೈರು ಹಾಜರಾದ ಬಗ್ಗೆ ಗ್ರಾಮಸ್ಥರು ಅಸಹನೆ ವ್ಯಕ್ತಪಡಿಸಿದರು.

ಪಂಚಾಯತ್ ವ್ಯಾಪ್ತಿಯ ಜನಸಂಖ್ಯೆ ಸುಮಾರು 15 ಸಾವಿರದಷ್ಟಿದ್ದು ಇಷ್ಟು ಜನರಿಗೆ ಒಂದೇ ಕ್ರೀಡಾಂಗಣವಿದ್ದು, ಅದು ಕೂಡಾ ಅಭಿವೃದ್ಧಿ ಮಾಡದೆ ಇರುವ ಬಗ್ಗೆ ಸದಸ್ಯರು ಅಸಮಧಾನ ವ್ಯಕ್ತಪಡಿಸಿದರು. ಕಳೆದ ಹಲವು ವರ್ಷಗಳಿಂದ ನಿವೇಶನ ರಹಿತರಿಗೆ ಸಮರ್ಪಕವಾಗಿ ನಿವೇಶನಗಳನ್ನು ನೀಡದಿರುವ ಬಗ್ಗೆಯೂ, ಗ್ರಾಮ ವ್ಯಾಪ್ತಿಯ 94ಸಿ ಅರ್ಜಿಗಳ ವಿಲೇವಾರಿ ಆಗದಿರುವ ಬಗ್ಗೆಯೂ ಅಸಮಧಾನ ವ್ಯಕ್ತಪಡಿಸಿದರು.

ನೀರ್ಕೆರೆ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು ಸೇತುವೆ ಕುಸಿದರೆ ಗ್ರಾಮಸ್ಥರಿಗೆ ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ಘನ ವಾಹನಗಳ ಸಂಚಾರ ನಿಷೇಧಕ್ಕೆ ಸಮರ್ಪಕ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಸಂತೆಕಟ್ಟೆಯಲ್ಲಿ ಈಗಾಗಲೇ ಆರೋಗ್ಯ ಇಲಾಖೆಗೆ ಮೀಸಲಿರಿಸಿದ ಜಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಆರೋಗ್ಯ ಕೇಂದ್ರ ಕಟ್ಟಡವು ಪ್ರಸ್ತುತ ಇರುವ ಸಂಜೀವಿನಿ ಕಟ್ಟಡ ಹಾಗೂ ವಿವಿಧೋದ್ದೇಶ ಸಭಾಂಗಣಕ್ಕೆ ಅಡ್ಡಿಯಾಗುತ್ತದೆ ಆದುದರಿಂದ ಈ ಹೊಸ ಕಟ್ಟಡವನ್ನು ಇಲ್ಲೇ ಮುಂದೆ ಇರುವ ಖಾಲಿ ಜಾಗದಲ್ಲಿ ನಿರ್ಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. 

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವ್ಯಕ್ತಿಗಳಿಗೆ ಈ ಹಿಂದೆ ಗ್ರಾಮ ಪಂಚಾಯತ್‌ನಲ್ಲಿ ಅರ್ಜಿ ಸಲ್ಲಿಸಿ ಸಮಗ್ರ ಅಪಘಾತ ವಿಮಾ ಯೋಜನೆ ಅಡಿ ನೋಂದಾಯಿಸಿದ ಫಲಾನುಭವಿಗಳಿಗೆ ವಿಮಾ ಪಾಲಿಸಿಯನ್ನು ಹಸ್ತಾಂತರಿಸಲಾಯಿತು.

ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ್ ಡಿ’ಸೋಜ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಪಿಡಿಒ ರೋಹಿಣಿ ಬಿ., ದ್ವಿತೀಯ ದರ್ಜೆ ಲೆಕ್ಕ ಸಹಾಯಕ ರಮೇಶ್ ಬಂಗೇರಾ, ಸಿಬಂದಿ ರಾಕೇಶ್ ಭಟ್ ಉಪಸ್ಥಿತರಿದ್ದರು. 

ಇತ್ತೀಚೆಗೆ ನಿಧನರಾದ ಗ್ರಾಪಂ ಮಾಜಿ ಅಧ್ಯಕ್ಷ ಹಸನಬ್ಬ ಕೆ. ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article