ರಾಜ್ಯ ಸರ್ಕಾರ ಆಚರಿಸುವ ಮೈಸೂರು ದಸರಾ ನಮ್ಮ ನಾಡಹಬ್ಬ-ಧಾರ್ಮಿಕ ಆಚರಣೆಯಲ್ಲ: ಅಖಿಲ ಭಾರತ ವಕೀಲರ ಒಕ್ಕೂಟ

ರಾಜ್ಯ ಸರ್ಕಾರ ಆಚರಿಸುವ ಮೈಸೂರು ದಸರಾ ನಮ್ಮ ನಾಡಹಬ್ಬ-ಧಾರ್ಮಿಕ ಆಚರಣೆಯಲ್ಲ: ಅಖಿಲ ಭಾರತ ವಕೀಲರ ಒಕ್ಕೂಟ

ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ವರ್ಷ ಆಚರಿಸುತ್ತಿರುವ "ಮೈಸೂರು ದಸರಾ" ನಮ್ಮ ನಾಡ ಹಬ್ಬವಾಗಿದ್ದು, ಧಾರ್ಮಿಕ ಆಚರಣೆಯಲ್ಲ. ಇದು ನಾಡಿನ ಸಮಸ್ತ ಜನರನ್ನು ಒಳಗೊಳ್ಳುವ ಕಾರ್ಯಕ್ರಮವಾಗಿದ್ದು, ಇದರ  ಉದ್ಘಾಟನೆಗೆ, ವಕೀಲರೂ ಆಗಿರುವ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಸರಕಾರವು ಆಹ್ವಾನ  ಮಾಡಿರುವುದಕ್ಕೆ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಬಸವರಾಜ ಪಾಟೀಲ ಯತ್ನಾಳ್ ವಿರೋಧ ವ್ಯಕ್ತ ಪಡಿಸಿರುವುದು ಅತ್ಯಂತ ಖಂಡನೀಯ ಮತ್ತು ವಿಷಾದಕರ ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ದ.ಕ. ಜಿಲ್ಲಾ ಸಮಿತಿ ತಿಳಿಸಿದೆ. 

ಬಾನು ಮುಷ್ತಾಕ್ ಒಬ್ಬ ಅಲ್ಪಸಂಖ್ಯಾತ ಮಹಿಳೆ ಎನ್ನುವ ಕಾರಣಕ್ಕೆ ವಿರೋಧಿಸುತ್ತಿರುವ ಸಂಸದ ಪ್ರತಾಪ್ ಸಿಂಹ ಮತ್ತು ಬಸವರಾಜ್ ಯತ್ನಾಳರು ಹಿಂದೂ ಧರ್ಮದ ಒಳ ಸುಳಿಗಳನ್ನು ಬಳಸುವ ಮೂಲಕ ನಾಡಿನ ಜನ ಸಾಂಸ್ಕೃತಿಕ ಆಚರಣೆ ಮತ್ತು ಪರಂಪರೆಯಲ್ಲಿ ಅಲ್ಪಸಂಖ್ಯಾತರನ್ನು ಮತ್ತು ಮಹಿಳೆಯರನ್ನು ಏಕ ಕಾಲಕ್ಕೆ ದೂರವಿಡುವ ಹುನ್ನಾರ ನಡೆಸುತ್ತಿದ್ದಾರೆ.  

ಇದು ನಾಡಿನ ಜನತೆಯ ಐಕ್ಯತೆ  ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಸಂವಿಧಾನ ವಿರೋಧಿ ಕೃತ್ಯ ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಯಶವಂತ ಮರೋಳಿ ಮತ್ತು  ಪ್ರಧಾನ ಕಾರ್ಯದರ್ಶಿ ನಿತಿನ್ ಕುತ್ತಾರ್ ತಿಳಿಸಿದ್ದಾರೆ.  

ಸೌಹಾರ್ದ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಜನತೆ ಯತ್ನಾಳ್ ಮತ್ತು ಪ್ರತಾಪ್ ಸಿಂಹ ಅವರ ಕೋಮುವಾದಿ ಹುನ್ನಾರದ ಈ ಹೇಳಿಕೆಗಳನ್ನು ಖಂಡಿತವಾಗಿಯೂ ಬೆಂಬಲಿಸುವುದಿಲ್ಲ. ಸೌಹಾರ್ದ ಪರಂಪರೆಯನ್ನು ಕದಡುತ್ತಿರುವವರ ಕುಚೇಷ್ಟೆಗಳನ್ನು ತಡೆಯದಿದ್ದಲ್ಲಿ ಮುಂಬರುವ ದಿನಗಳಲ್ಲಿ ಇಂತಹ ವ್ಯಕ್ತಿಗಳು ಮತ್ತು ಅವರನ್ನು ಬೆಂಬಲಿಸುವ ಸಂಘಟನೆಗಳು ಭಾರೀ ಬೆಲೆ ತೆರಬೇಕಾದ ಪ್ರಸಂಗ ಎದುರಿಸಬೇಕಾಗುತ್ತದೆ. ಆದ್ದರಿಂದ ನಾಡಿನ ಜನರು ಪ್ರತಾಪ್ ಸಿಂಹ ಮತ್ತು ಯತ್ನಾಳ್ ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುವುದು ಮಾತ್ರವಲ್ಲ ನಮ್ಮ ನಾಡಿನ ಭವ್ಯ ಸೌಹಾರ್ದ ಪರಂಪರೆಯನ್ನು ಒಗ್ಗಟ್ಟಾಗಿ ಎತ್ತಿ ಹಿಡಿಯಬೇಕೆಂದು ಕರೆ ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article