 
ಧರ್ಮಸ್ಥಳ ವಿರುದ್ಧ ಅಪಪ್ರಚಾರ: ಯೂಟ್ಯೂಬರ್‌ಗಳಿಗೆ ವಿದೇಶಿ ಹಣ-ಇಡಿಯಿಂದ ಪರಿಶೀಲನೆ
ಮಂಗಳೂರು: ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಲು ಯೂಟ್ಯೂಬರ್‌ಗಳಿಗೆ ವಿದೇಶದಿಂದ ಹಣ ಹರಿದುಬಂದಿದೆ ಎಂಬ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಮಂಗಳವಾರ ಕೇಂದ್ರ ಗೃಹ ಸಚಿವಾಲಯಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪತ್ರ ಬರೆದಿರುವ ಬೆನ್ನಲ್ಲೇ ದಾಖಲೆಗಳ ಪರಿಶೀಲನೆ ಮಾಡುವಂತೆ ಜಾರಿ ನಿರ್ದೇಶನಾಲಯ (ಇ.ಡಿ)ಕ್ಕೆ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಇ.ಡಿ ಅಧಿಕಾರಿಗಳು ಈಗ ಯೂಟ್ಯೂಬರ್ಗಳ ಆದಾಯದ ಮೂಲ ಕೆದಕುತ್ತಿದ್ದಾರೆ.
ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯಿಸಿ, ದೇವಸ್ಥಾನದ ಪಾವಿತ್ರ್ಯತೆ ಉಳಿಸುವ ಸಲುವಾಗಿ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ. ಯಾವುದೇ ವ್ಯಕ್ತಿಗತವಾಗಿ ನಾನು ಪತ್ರ ಬರೆದಿಲ್ಲ ಎಂದಿದ್ದಾರೆ. ಶಾಸಕ ಭರತ್ ಶೆಟ್ಟಿ ಮಾತಾಡಿ, ಎನ್‌ಐಎ ಅಥವಾ ಇಡಿ ತನಿಖೆಯಾದರೆ ಯಾರೆಲ್ಲರ ಬ್ಯಾಂಕ್ ಖಾತೆಗಳಿಗೆ ಎಷ್ಟೆಲ್ಲ ಹಣ ಎಲ್ಲೆಲ್ಲಿಂದ ಬಂದಿದೆ ಎಂಬುದು ಗೊತ್ತಾಗುತ್ತೆ ಎಂದಿದ್ದಾರೆ.
ತಿಮರೋಡಿ, ಸಮೀರ್, ಮಟ್ಟೆಣ್ಣನವರ ವಿರುದ್ಧ ದೂರು..
ಧರ್ಮಸ್ಥಳ ಪ್ರಕರಣದಲ್ಲಿ ಸುಜಾತ ಭಟ್ ಅವರನ್ನ ಮುಂದಿಟ್ಟುಕೊಂಡು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆಂದು ಆರೋಪಿಸಿ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.
ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಜಾತ ಭಟ್ ತನಗೆ ಮಗಳಿದ್ದಾಳೆ ಎಂದು ಸುಳ್ಳು ಹೇಳಿದ್ದಾರೆ. ಅವರಿಗೆ ಅನನ್ಯಾ ಭಟ್ ಎಂಬ ಮಗಳೇ ಇಲ್ಲ ಎಂಬುದು ಗೊತ್ತಾಗಿದೆ. ವಾಸಂತಿ ಎಂಬವರ ಫೋಟೋ ತೋರಿಸಿ ಇವಳೇ ನನ್ನ ಮಗಳು ಅನನ್ಯಾ ಭಟ್ ಅಂತ ಹೇಳಿದ್ದಾರೆ. ಪ್ರತಿದಿನ ಒಂದೊಂದು ಸುಳ್ಳು ಹೇಳ್ತಿದ್ದಾರೆ. ಅದಕ್ಕೆ ಅವರ ವಿರುದ್ಧ ದೂರು ಕೊಟ್ಟಿದ್ದೇನೆ, ಜೊತೆಗೆ ಸುಜಾತಾ ಭಟ್ ಅವರನ್ನ ಮುಂದಿಟ್ಟುಕೊಂಡು ಸುಳ್ಳು ಆರೋಪ ಮಾಡಿದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸಮೀರ್ ಎಂ.ಡಿ ವಿರುದ್ಧ ದೂರು ಕೊಟ್ಟಿದ್ದೇನೆ. ಇವರೆಲ್ಲರು ಸೇರಿ ಪುಣ್ಯ ಕ್ಷೇತ್ರವನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.