
ಶ್ರೀ ಮಹಾವೀರ ಕಾಲೇಜಿನ ವಿದ್ಯಾರ್ಥಿಗಳಿಗೆ ಬಂಡಾಯ ಸಾಹಿತಿ ಬರಗೂರು ಆವರಿಂದ ವಿಶೇಷ ಉಪನ್ಯಾಸ
ಅವರು ಶ್ರೀ ಮಹಾವೀರ ಕಾಲೇಜಿನ ಕನ್ನಡ ವಿಭಾಗದ ಕನ್ನಡ ಸಂಘ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶಗಳ ಸಹಯೋಗದೊಂದಿಗೆ ಬುಧವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಎತ್ತಿನ ಗಾಡಿಯ ಚಕ್ರವನ್ನು ಕಂಡು ಹಿಡಿದ ದಿನವೇ ತಂತ್ರಜ್ಞಾನ ರೂಢಿಗೆ ಬಂತು. ಆದರೆ ಅದೇ ತಂತ್ರಜ್ಞಾನದ ಬಳಕೆ ಅತಿಯಾದರೆ ಅದು ಮನುಷ್ಯನ ಮನಸ್ಸಿನ ವಿರೋಧಿಯಾಗುತ್ತದೆ. ತಂತ್ರಜ್ಞಾನದ ಭರಾಟೆಯಲ್ಲಿ ತತ್ವಜ್ಞಾನ, ವಿಜ್ಞಾನಗಳು ಮರೆಯಾಗಿವೆ. ಕಲಾ, ವಿಜ್ಞಾನ, ವಾಣಿಜ್ಯ ಕ್ಷೇತ್ರಗಳಿಗೆ ಸೇರಿದ ಸರ್ವರ ಸಮತೋಲನ ಇದ್ದಲ್ಲಿ ಸಾಮಾಜಿಕ ವ್ಯವಸ್ಥೆ ಚೆನ್ನಾಗಿರುತ್ತದೆ ಎಂದರು. ತಮ್ಮ ಸಾಹಿತ್ಯ ರಚನೆಗೆ ಸ್ಪೂರ್ತಿ ನೀಡಿದ ಗುರುಗಳನ್ನು ನೆನೆದರು. ಪ್ರಕೃತಿಯಲ್ಲಿ ಶ್ರೀಗಂಧವೂ ಮುಖ್ಯವೇ ಜಾಲಿಯ ಮರವೂ ಮುಖ್ಯವೇ. ಪ್ರಕೃತಿಯಲ್ಲಿ ಇಲ್ಲದ ಅಸಮಾನತೆ ಮನುಷ್ಯ ಪ್ರಪಂಚದಲ್ಲಿದೆ ಇದನ್ನು ಹೋಗಲಾಡಿಸಬೇಕು ಎಂದು ತಿಳಿ ಹೇಳಿದರು.
ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬರಗೂರು ರಾಮಚಂದ್ರಪ್ಪ ಅವರ ಕೃತಿಗಳಲ್ಲಿ ನೀಡಿದ ಅನೇಕ ಉಪಯುಕ್ತ ಮಾತುಗಳನ್ನು ಉಲ್ಲೇಖಿಸಿ ವಿಶಿಷ್ಟ ರೀತಿಯಲ್ಲಿ ಅವರನ್ನು ಸಭೆಗೆ ಪರಿಚಯಿಸಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯಲಕ್ಷ್ಮಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹರೀಶ್ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಕನ್ನಡ ವಿಭಾಗ ಮುಖ್ಯಸ್ಥರು ಡಾ. ಚಿನ್ನಸ್ವಾಮಿ, ಎನ್ ಪ್ರಸ್ತಾವನೆಯೊಂದಿಗೆ ಗಣ್ಯರನ್ನು ಸ್ವಾಗತಿಸಿದರು, ಪ್ರಥಮ ಬಿ.ಎಸ್ಸಿ ಪ್ರಣಮ್ಯ ಮತ್ತು ತಂಡ ಕನ್ನಡ ಭಾವಗೀತೆಯೊಂದಿಗೆ ಪ್ರಾರ್ಥಿಸಿದರು. ಅಂತಿಮ ಬಿ.ಎಸ್ಸಿ. ವಿದ್ಯಾರ್ಥಿನಿ ರಕ್ಷಿತಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.ಕನ್ನಡ ಉಪನ್ಯಾಸಕಿ ಚಂದನಾ ವಂದಿಸಿದರು.