ಮಗುಭಾಗ್ಯ ಆರೋಪಿ ತಂದೆಯನ್ನು ದೇವಳದಿಂದ ವಜಾಗೊಳಿಸಿ: ವಿಶ್ವಕರ್ಮ ಯುವ ಮಿಲನ್ ಆಗ್ರಹ
ಪುತ್ತೂರು ಮಹಾಲಿಂಗೇಶ್ವರ ದೇವರ ಕಾರ್ಯದಲ್ಲಿ ಭಾಗಿಯಾಗದಂತೆ ಹಾಗೂ ಶಾರದ ಭಜನಾ ಮಂದಿರದ ಸಮಿತಿಯಲ್ಲಿ ಅಧ್ಯಕ್ಷ ನೆಲೆಯಲ್ಲಿರುವ ಆರೋಪಿ ಕೃಷ್ಣ ಜೆ ರಾವ್ ಅವರ ತಂದೆ ಪಿ.ಜಿ.ಜಗನ್ನೀವಾಸ ರಾವ್ ಅವರನ್ನು ತಕ್ಷಣದಿಂದ ವಜಾಗೊಳಿಸಬೇಕು. ಆರೋಪಿ ತಂದೆ ತನ್ನ ಮಗನೊಂದಿಗೆ ಯುವತಿಗೆ ಮದುವೆ ಮಾಡಿಸುವುದಾಗಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಒಪ್ಪಿಗೆ ಪತ್ರ ನೀಡಿದ್ದಾರೆ. ಆದರೆ ಬಳಿಕ ಮಗನ ಮೇಲಿನ ಆರೋಪ ಸಾಬೀತಾಗಿಲ್ಲ ಎಂಬ ನೆಪ ಒಡ್ಡಿ ವಚನಭ್ರಷ್ಟರಾಗಿದ್ದಾರೆ. ಇವರು ಪುತ್ತೂರು ದೇವಳ ಹಾಗೂ ಶಾರದಾ ಭಜನಾ ಮಂದಿರದ ದೇವರ ಕಾರ್ಯದಲ್ಲಿ ಭಾಗಿಯಾಗುತ್ತಿರುವುದು ಮಗ ಮಾಡಿರುವ ಕೃತ್ಯಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ. ದೇವಸ್ಥಾನದ ಹೆಸರಿಗೆ ಕುಂದು ತರುವ ಯಾವುದೇ ವ್ಯಕ್ತಿಗಳನ್ನು ನಿರ್ಧಾಕ್ಷಿಣ್ಯವಾಗಿ ಹೊರೆಗೆ ಇಡುವುದು ಆಡಳಿತ ಘನತೆಯಾಗಿದೆ. ಈ ಹಿಂದೆ ಬ್ರಹ್ಮವಾಹಕರೊಬ್ಬರಿಂದ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆಯಾದಾಗ ಅಂದಿನ ಅಧ್ಯಕ್ಷರು ತಕ್ಷಣವೇ ಅವರನ್ನು ವಜಾಗೊಳಿಸಿರುವುದನ್ನು ವಿಶ್ವಕರ್ಮ ಯುವ ಮಿಲನ್ ಶ್ಲಾಘಿಸುತ್ತದೆ. ಅದೇ ರೀತಿಯಲ್ಲಿ ಪಿ.ಜಿ ಜಗನ್ನೀವಾಸ ರಾವ್ ಅವರನ್ನು ಕೂಡಾ ವಜಾಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಪುತ್ತೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ಶಾರದಾ ಭಜನಾ ಮಂದಿರ ಕಾರ್ಯದರ್ಶಿ ಅವರಿಗೆ ವಿಶ್ವಕರ್ಮ ಯುವ ಮಿಲನ್ ಮನವಿ ನೀಡಿದೆ.