ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ

ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ


ಉಡುಪಿ: ಬಾರಕೂರಿನ ರುಕ್ಮಿಣಿ ಶೆಡ್ತಿ ಸ್ಮಾರಕ ನೇಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಣಿ ಚಿಕ್ಕಾಯಿ ತಾಯಿ ಚಾರಿಟೇಬಲ್ ಟ್ರಸ್ಟ್ (ರಿ) ಗುಳ್ಳಾಡಿ, ಆದಿಮ ಕಲಾ ಟ್ರಸ್ಟ್ (ರಿ) ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, ನಮ್ಮ ಕಣ್ಮುಂದೆಯೇ ನಮ್ಮ ಪ್ರಾಚೀನ ಕೋಟೆಗಳು, ಸ್ಮಾರಕಗಳು ಅಭಿವೃದ್ಧಿಯ ಹೆಸರಿನಲ್ಲಿ ಕಣ್ಮರೆಯಾಗುತ್ತಿದ್ದು ನಾಳಿನ ಯುವ ಜನಾಂಗಕ್ಕೆ ಚರಿತ್ರೆಯ ಅವಶೇಷಗಳೇ ಇಲ್ಲದೆ ನಮ್ಮ ಚರಿತ್ರೆ ನಾಶವಾಗುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ ಎಂದು ನುಡಿದು ತುಳು ಸಾಮ್ರಾಜ್ಯದ ರಾಜಧಾನಿ ಬಾರಕೂರಿನ ಅಳಿದುಳಿದ ಸ್ಮಾರಕ ಅಥವಾ ಅವಶೇಷಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು. 

ಗುಳ್ಳಾಡಿಯ ಚಿಕ್ಕಾಯಿ ತಾಯಿ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಡಾ. ರಘುರಾಮ್ ಶೆಟ್ಟಿ ಯವರು, ಆಳುಪ ಚಕ್ರವರ್ತಿ, ಹೊಯ್ಸಳ ಚಕ್ರವರ್ತಿಯ ಪಟ್ಟದ ರಾಣಿ ಚಿಕ್ಕಾಯಿ ತಾಯಿಯ ಹೆಸರಿನಲ್ಲಿ ಬಾರಕೂರಿನಲ್ಲಿ ಪ್ರತಿವರ್ಷ ಚಿಕ್ಕಾಯಿ ತಾಯಿಯ ಉತ್ಸವವನ್ನು ಸರ್ಕಾರ ಹಮ್ಮಿಕೊಳ್ಳಬೇಕು ಹಾಗೂ ಬಾರಕೂರನ್ನು ಒಂದು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿದರು.

ಈ ಕಾರ್ಯಕ್ರಮದಲ್ಲಿ ಚಿಕ್ಕಾಯಿ ತಾಯಿಯ ಕುರಿತು ವಿಶೇಷ ಉಪನ್ಯಾಸ ನೀಡಿದ ಆದಿಮ ಕಲಾ ಟ್ರಸ್ಟ್‌ನ ಸ್ಥಾಪಕ ಆಡಳಿತ ಮುಖ್ಯಸ್ಥರಾದ ಪ್ರೊ. ಟಿ. ಮುರುಗೇಶಿಯವರು ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಹಿಂದಿನ ಧೀಶಕ್ತಿ ರಾಣಿ ಚಿಕ್ಕಾಯಿ ತಾಯಿ ಹಾಗೂ ಸಾಮ್ರಾಜ್ಯವನ್ನು ಆಳ್ವಿಕೆ ಮಾಡಿದ ಸಾಳುವ ಮತ್ತು ತುಳುವ ರಾಜಮನೆತನಗಳು ತುಳುನಾಡಿನ ಪ್ರತಿಷ್ಠಿತ ಎರಡು ರಾಜಮನೆತನಗಳು ಎಂದು ಸೋದಾರಣವಾಗಿ ವಿವರಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ್ ಶೆಟ್ಟಿ ಎಸ್. ಅವರು ತುಳುನಾಡಿನ ಸಾಂಸ್ಕೃತಿಕ ರಾಜಧಾನಿ ಬಾರಕೂರನ್ನು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಗಳು ನಿರ್ಲಕ್ಷಿಸಿರುವುದಕ್ಕೆ ವಿಷಾದವನ್ನು ವ್ಯಕ್ತಪಡಿಸಿದರು. 

ಐಕ್ಯೂಎಸಿ ಮುಖ್ಯಸ್ಥೆ ಪ್ರೊ. ಶೋಭಾ ಹಾಗೂ ಸಮಾಜಶಾಸ್ತ್ರ ವಿಭಾಗದ ಪ್ರೊ. ಅಮ್ರುತ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article