
ಸೆ.12 ರಂದು ಸಂಜೆ ಮಂಗಳೂರಿನಲ್ಲಿ ‘ಕಮ್ಯೂನಿಟಿ ಯೂತ್ ಲೀಡರ್ಸ್ ಮೀಟ್-2025’
ಬಂಟ್ವಾಳ: ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಶನ್ ರಾಜ್ಯ ಸಮಿತಿ ವತಿಯಿಂದ ಯುವ ನಾಯಕತ್ವ, ವೃತ್ತಿ ಮಾರ್ಗದರ್ಶನ ಮತ್ತು ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಕರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸೆ.12 ರಂದು ಸಂಜೆ ಮಂಗಳೂರಿನ ಇಂಡಿಯಾನ ಕನ್ವೆನ್ಷನ್ ಹಾಲ್‌ನಲ್ಲಿ ‘ಕಮ್ಯೂನಿಟಿ ಯೂತ್ ಲೀಡರ್ಸ್ ಮೀಟ್-2025’ ಆಯೋಜಿಸಲಾಗಿದೆ ಎಂದು ಯುಇಎನ ಬಂಟ್ವಾಳ ವಲಯದ ಅಧ್ಯಕ್ಷ ಲತೀಫ್ ನೇರಳಕಟ್ಟೆ ತಿಳಿಸಿದರು.
ಸೋಮವಾರ ಸಂಜೆ ಬಂಟ್ವಾಳ ಪ್ರಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಈ ಕಾರ್ಯಕ್ರದಲ್ಲಿ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಸೇರಿದಂತೆ ಸಮುದಾಯದ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಯುಇಎ ಸಂಸ್ಥೆ ಕ್ರೀಡೆಗಳ ಮೂಲಕ ಸಮುದಾಯದ ಸಬಲೀಕರಣ ಮತ್ತು ಅಭಿವೃದ್ಧಿಯತ್ತ ಕೊಂಡೊಯ್ಯಲಿದೆ. ಎಲ್ಲಾ ವಿಧದ ಕ್ರೀಡಾಪಟುಗಳನ್ನು ಸಿದ್ದಪಡಿಸಿ, ಸ್ಪರ್ಧಾತ್ಮಕ ಮಟ್ಟದಲ್ಲಿ ಭಾಗವಹಿಸಲು ಉತ್ತೇಜಿಸುವುದು ಸಂಸ್ಥೆತ ಉದ್ದೇಶವಾಗಿದೆ. ಭಾರತೀಯ ಸೊಸೈಟಿ ಕಾಯ್ದೆಯಡಿ ನೋಂದಾಯಿತವಾದ ಈ ಸಂಸ್ಥೆ ಕರ್ನಾಟಕದಲ್ಲಿ ಕ್ರೀಡೆ ಮತ್ತು ಆಟಗಳನ್ನು ಬೆಳೆಸಲು ಶ್ರಮಿಸುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ಪ್ರಮುಖ ಧ್ವನಿಯಾಗಿ ಹೊರಹೊಮ್ಮಲು ಬದ್ಧವಾಗಿದೆ ಎಂದರು.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಈಗಾಗಲೇ ಸುಮಾರು 21 ವಲಯ ಸಮಿತಿ ರಚಿಸಲಾಗಿದ್ದು, 7000ಕ್ಕೂ ಅಧಿಕ ಸದಸ್ಯರೊಂದಿಗೆ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಕ್ರೀಡಾಪಟುಗಳ ಜೀವನದಲ್ಲಿ ಕಾರ್ಯಬದ್ಧ ಒಕ್ಕೂಟವನ್ನು ನಿರ್ಮಿಸಿ, ಬೆಳೆಸಿ, ಮುನ್ನಡೆಸುವ ಗುರಿ ಇಟ್ಟುಕೊಂಡಿದೆ ಎಂದರು.
ಬಂಟ್ವಾಳ ವಲಯದ ಆಯ್ಕೆ ಸಮಿತಿ ಸದಸ್ಯರಾದ ವಹಾಬ್ ಯೂನಿಕ್ ಗೂಡಿನಬಳಿ, ರಿಯಾಝ್ ಪಾಣೆಮಂಗಳೂರು, ಜಿ.ಎಂ. ಇಬ್ರಾಹಿಂ ಕುಕ್ಕಾಜೆ, ಇರ್ಶಾದ್ ಗೂಡಿನಬಳಿ ಸುದ್ದಿಗೋಷ್ಠಿಯಲ್ಲಿದ್ದರು.