ಆಡಳಿತಾತ್ಮಕ ಸೇವೆಯನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಒದಗಿಸಿ: ಗ್ರಾಮಸ್ಥರ ಆಗ್ರಹ

ಆಡಳಿತಾತ್ಮಕ ಸೇವೆಯನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಒದಗಿಸಿ: ಗ್ರಾಮಸ್ಥರ ಆಗ್ರಹ


ಬಂಟ್ವಾಳ: ಗ್ರಾಮೀಣ ಜನತೆಗೆ ಸಹಕಾರಿಯಾಗುವಂತೆ ಗ್ರಾಮ ಪಂಚಾಯತ್ ಮಟ್ಟದಲ್ಲಿ 9/11 ಮೊದಲಾದ ಸೇವೆಗಳನ್ನು ಒದಗಿಸಲು ಸರಕಾರವನ್ನು ಒತ್ತಾಯಿಸಿ ಪತ್ರ ಬರೆಯಲು ಪಿಲಾತಬೆಟ್ಟು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.

ಬಂಟ್ವಾಳ ತಾ. ಪಿಲಾತಬೆಟ್ಟು ಗ್ರಾಮ ಪಂಚಾಯತ್‌ನ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಪುಂಜಾಲಕಟ್ಟೆಯಲ್ಲಿ ಗ್ರಾಮ ಪಂಚಾಯತ್ ರಾಜೀವ ಗಾಂಧಿ ಸೇವಾಕೇಂದ್ರ ಸಭಾಂಗಣದಲ್ಲಿ ನಡೆಯಿತು.

ಗ್ರಾ.ಪಂ. ಅಧ್ಯಕ್ಷೆ ಶಾರದಾ ಅವರು ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಮ್ತಾಜ್ ಅವರು ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಅವರು, ಬಡ ಜನರು ಪ್ರಸ್ತುತ ಹಲವಾರು ಸೇವೆಗಳನ್ನು ಪಡೆಯಲು ತಾಲೂಕು ಕೇಂದ್ರವಾದ ಬಿ.ಸಿ.ರೋಡ್‌ಗೆ ಸುತ್ತಬೇಕು. ಮನೆ, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಿಕೆ ಮೊದಲಾದ ಆಡಳಿತಾತ್ಮಕ ಸೇವೆಗಳನ್ನು ಗ್ರಾಮಸ್ಥರಿಗೆ ಪಂಚಾಯತ್ ಮಟ್ಟದಲ್ಲಿ ಒದಗಿಸಿದರೆ ಅನುಕೂಲವಾಗುವುದು ಎಂದು ಪ್ರಸ್ತಾವಿಸಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಗುತ್ತಿಗೆದಾರ ಪುಷ್ಪಾನಂದ, ಹರೀಶ್ ಶೆಟ್ಟಿ ಮೊದಲಾದವರು ಇದಕ್ಕೆ ಧ್ವನಿಗೂಡಿಸಿದರು. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವಂತೆ ಗ್ರಾಮ ಆಡಳಿತಾಧಿಕಾರಿ ಪ್ರವೀಣ್ ಕುಮಾರ್ ಅವರಿಗೆ ಮತ್ತು ಪಂಚಾಯತ್ ನಿರ್ಣಯ ಕೈಗೊಳ್ಳುವಂತೆ ನೋಡಲ್ ಅಧಿಕಾರಿ ಅವರು ಸೂಚಿಸಿದರು.

ಗ್ರಾಮ ಸಭೆಗೆ ಇಲಾಖಾಧಿಗಳ ಗೈರು ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರ ಸಮಸ್ಯೆಗೆ ಉತ್ತರ ನೀಡುವರಾರು, ಅಧಿಕಾರಿಗಳು ಬಾರದಿದ್ದರೆ ಗ್ರಾಮ ಸಭೆಯೇ ಬೇಡ ಎಂದು ಗ್ರಾಮಸ್ಥರು ಹೇಳಿದರು. ಅಧಿಕಾರಿಗಳಿಗೆ ಆಹ್ವಾನ ನೀಡಲಾಗಿದೆ ಎಂದ ಪಂ.ಅ. ಅಧಿಕಾರಿ ಯಮುನಪ್ಪ ಕೊರವರ ಅವರು, ಅಧಿಕಾರಿಗಳ ಗೈರು ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ತಿಳಿಸಿದರು. ವಾರ್ಡ್ ಸಭೆ, ಗ್ರಾಮ ಸಭೆಗಳಲ್ಲಿ ತೆಗೆದುಕೊಂಡ ನಿರ್ಣಯಗಳು ಅನುಷ್ಠಾನವಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ದಾರಿ ದೀಪ ನಿರ್ವಹಣೆಗೆ ಸಂಬಂಧಿಸಿ ಖರ್ಚು ವೆಚ್ಚಗಳ ಬಗ್ಗೆ ಪ್ರಶ್ನಿಸಿದ ಮೋಹನ ಸಾಲ್ಯಾನ್, ವಿಕ್ಟರ್ ಡಿಸೋಜ ಅವರು, ದಾರಿ ದೀಪ ಸಮರ್ಪಕವಾಗಿ ದುರಸ್ತಿ ಮಾಡುತ್ತಿಲ್ಲ ಎಂದು ಆರೋಪಿಸಿದರಲ್ಲದೆಅವರನ್ನು ಬದಲಾಯಿಸುವಂತೆ ಆಗ್ರಹಿಸಿದರು.

ಗುತ್ತಿಗೆದಾರರ ಗುತ್ತಿಗೆ ಅವಧಿ ಮುಗಿದ ಬಳಿಕ ಬದಲಾಯಿಸುವಂತೆ ನೋಡಲ್ ಅಧಿಕಾರಿ ಪಿಡಿಒ ಅವರಿಗೆ ಸೂಚಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ವಿವಿಧ ಕಾಂಕ್ರೀಟ್ ರಸ್ತೆ ನಿರ್ಮಾಣದಲ್ಲಿ ರಸ್ತೆಯ ಉದ್ದ ವ್ಯತ್ಯಾಸದ ಬಗ್ಗೆ ಗ್ರಾ.ಪಂ. ಸದಸ್ಯ ನೆಲ್ವಿಸ್ಟರ್ ಪಿಂಟೋ ಅವರು ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗದ ಅಭಿಯಂತರ ಕೃಷ್ಣ ಅವರ ಗಮನ ಸೆಳೆದರು.ಪಂಚಾಯತ್ ರಾಜ್ ಶೆಡ್ಯೂಲ್ ರೇಟ್ ಮೂಲಕ ನಡೆಯುವ ಕಾಮಗಾರಿ ಒಂದೇ ತೆರನಾಗಿದ್ದು, ಕೆಆರ್‌ಡಿಎಲ್ ಮೊದಲಾದ ಇತರ ಇಲಾಖೆಗಳ ಕಾಮಗಾರಿಗಳಲ್ಲಿ ವ್ಯತ್ಯಾಸ ಬರಬಹುದು ಎಂದು ಕೃಷ್ಣ ಅವರು ವಿವರಿಸಿದರು. 

ಈ ಬಗ್ಗೆ ಕಾಮಗಾರಿಗಳನ್ನು ಬೇರೆ ಏಜೆನ್ಸಿಗೆ ನೀಡದಂತೆ ಸರಕಾರಕ್ಕೆ ಪತ್ರ ಬರೆಯಲು ನಿರ್ಣಯಿಸಲಾಯಿತು.

ನಯನಾಡು ಖಾಸಗಿ ಅನುದಾನಿತ ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ಹರೀಶ್ ಶೆಟ್ಟಿ ಅವರು ಶಿಕ್ಷಣ ಇಲಾಖೆಯ ಗಮನ ಸೆಳೆದರು. ಈ ಬಗ್ಗೆ ಈಗಾಗಲೇ ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ತಂದಿರುವುದಾಗಿ ಸಿಆರ್‌ಪಿ ರವಿ ಅವರು ಉತ್ತರಿಸಿದರು.

ಪುಂಜಾಲಕಟ್ಟೆ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಡಾ. ರಿತೇಶ್ ಶೆಟ್ಟಿ ಅವರು ಇಲಾಖಾ ಮಾಹಿತಿ ನೀಡಿದರು. ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಕೃಷಿ ಇಲಾಖೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ದೀಕ್ಷಾ ಪಿ.ಸಿ. ಅವರು ಬೆಳೆ ಸಮೀಕ್ಷೆ ಆಪ್, ಕೃಷಿ ಹೊಂಡ ನಿರ್ಮಾಣ ಬಗ್ಗೆ, ರೈತ ಉತ್ಪಾದಕ ಸಂಸ್ಥೆಯ ಸಿಇಒ ನವ್ಯಾ ಹೊಳ್ಳ ಅವರು ಮಹಿಳಾ ಒಕ್ಕೂಟದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ವಿವಿಧ ಇಲಾಖಾ ತಮ್ಮ ಇಲಾಖಾವಾರು ಮಾಹಿತಿ ನೀಡಿದರು. ವಸಂತ ಹೆಗ್ಡೆ, ಪುಷ್ಪರಾಜ ಶೆಟ್ಟಿ, ಇಬ್ರಾಹಿಂ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.

ಗ್ರಾ.ಪಂ. ಉಪಾಧ್ಯಕ್ಷ ಯೋಗೇಂದ್ರ, ಸದಸ್ಯರಾದ ಹರ್ಷಿಣಿ ಪುಷ್ಪಾನಂದ, ಲಕ್ಷ್ಮೀ ನಾರಾಯಣ ಹೆಗ್ಡೆ, ಕಾಂತಪ್ಪ ಪೂಜಾರಿ, ಪುಷ್ಪಲತಾ, ನೆಲ್ವಿಸ್ಟರ್ ಗ್ಲಾನ್ ಪಿಂಟೊ, ಲೀಲಾವತಿ ಶೆಟ್ಟಿ, ವನಿತಾ, ಅಂಗನವಾಡಿ, ಆಶಾ ಕಾರ್ಯಕರ್ತೆಯರು,ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಪಂ.ಅ. ಅಧಿಕಾರಿ ಯಮುನಪ್ಪ ಸ್ವಾಗತಿಸಿ, ಗ್ರಾ.ಪಂ. ಲೆಕ್ಕಾಧಿಕಾರಿ ಬಾಲಕೃಷ್ಣ ಅವರು ವಂದಿಸಿದರು. ಸಿಬ್ಬಂದಿ ಮಹಾಲಕ್ಷ್ಮಿ ವರದಿ ವಾಚಿಸಿ, ಲೆಕ್ಕ ಪತ್ರ ಮಂಡಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article