
ವಿಶ್ವಬ್ರಾಹ್ಮಣ ಸಮಾಜದ ವತಿಯಿಂದ ‘ಧರ್ಮ ರಕ್ಷಾ ಯಾತ್ರೆ’: ವೀರೇಂದ್ರ ಹೆಗ್ಗಡೆ
ಅವರು ಸೆ.19 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಗ್ಗಡೆಯವರ ಬೀಡುನಲ್ಲಿ ವಿಶ್ವ ಬ್ರಾಹ್ಮಣ ಸಮಾಜದ ಬಂಧುಗಳು ಭೇಟಿಯಾದ ಸಂದರ್ಭದಲ್ಲಿ ಅವರನ್ನುದ್ದೇಶಿಸಿ ಮಾತನಾಡಿದರು.
ದ.ಕ., ಉಡುಪಿ, ಉತ್ತರ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಸುಮಾರು 200ಕ್ಕೂ ಮಿಕ್ಕಿ ವಿಶ್ವ ಕರ್ಮ ಬಂಧುಗಳು ‘ಧರ್ಮ ರಕ್ಷಾ ಯಾತ್ರೆ’ಯಲ್ಲಿ ಕ್ಷೇತ್ರಕ್ಕೆ ಬಂದು ಆನೆಗುಂದಿ ಪ್ರತಿಷ್ಠಾನದ ವತಿಯಿಂದ ಧರ್ಮಾಧಿಕಾರಿಗಳನ್ನು ಗೌರವಿಸಿದರು.
ಶ್ರೀ ಕ್ಷೇತ್ರದ ಧರ್ಮೋತ್ಥಾನ ಟ್ರಸ್ಟ್ ಮೂಲಕ ಸುಮಾರು 380 ದೇವಸ್ಥಾನಗಳನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ನಿಮ್ಮ ಕರಕುಶಲ ಕಲೆಯಿಂದ ಮರದ ಕೆಲಸ, ಶಿಲ್ಪ ಕಲಾ ನೈಪುಣ್ಯತೆ ಶಾಶ್ವತವಾಗಿ ಉಳಿಯುವಂತಾಗಬೇಕು ಎಂದರು.
ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಆಚಾರ್ಯ ವಡೇರಹೋಬಳಿ ಮಾತನಾಡಿ, ಸನಾತನ ಧರ್ಮ, ಆಚಾರ ಉಳಿಯಲು ಶ್ರೀ ಕ್ಷೇತ್ರ ಧರ್ಮಸ್ಥಳದ ಮಾರ್ಗದರ್ಶನ ಅಗತ್ಯ. ಕ್ಷೇತ್ರದಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ, ದೇವಸ್ಥಾನಗಳಿಗೆ ಅನುದಾನ, ಭಕ್ತಾದಿಗಳಿಗೆ ಅನ್ನದಾನ ಹಲವಾರು ಕೊಡುಗೆಗಳು ನಿತ್ಯ ನಿರಂತವಾಗಿ ನಡೆದುಕೊಂಡು ಬರುತ್ತಿದೆ. ಯಾವುದೇ ಅಪಪ್ರಚಾರದ ವಿರುದ್ಧ ಹಿಂದೂಗಳು ಒಗ್ಗಟ್ಟಾಗಿ ದೇವಸ್ಥಾನದ ರಕ್ಷಣೆಗೆ ಬದ್ಧರಾಗಿರಬೇಕು. ವಿಶ್ವ ಬ್ರಾಹ್ಮಣ ಸಮಾಜ ಯಾವತ್ತೂ ತಮ್ಮ ಹಾಗೂ ಕ್ಷೇತ್ರದ ಬೆಂಬಲಕ್ಕಿದೆ. ಮುಂದಿನ ದಿನಗಳಲ್ಲಿ ಸಾವಿರಾರು ಬಂಧುಗಳು ಸೇರಿ ಕ್ಷೇತ್ರಕ್ಕೆ ಬಂದು ತಮ್ಮ ಸೇವಾ ಕಾರ್ಯವನ್ನು ಬೆಂಬಲಿಸಲಿದ್ದಾರೆ. ಸರಕಾರ ಪ್ರಕರಣಕ್ಕೆ ಇತಿಶ್ರೀ ಹಾಡಬೇಕು. ಆ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದರು.
ಆನೆಗುಂದಿ ಮಹಾಸಂಸ್ಥಾನದ ಕೆಮ್ಮಣ್ಣು ಗಣೇಶ್ ಆಚಾರ್ಯ, ವಿಶ್ವಕರ್ಮ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಹರೀಶ್ ಆಚಾರ್ಯ, ಮಾಧವ ಶರ್ಮ, ರಥ ಶಿಲ್ಪಿ ಕೋಟೇಶ್ವರ ರಾಜಗೋಪಾಲ ಆಚಾರ್ಯ, ಕಾರ್ಕಳದ ರವಿ ಆಚಾರ್ಯ, ಜನಾರ್ದನ ಆಚಾರ್ಯ ಆರಿಕ್ಕಾಡಿ,ಪ್ರಭಾಕರ ಆಚಾರ್ಯ, ಭಟ್ಕಳದ ಗಜಾನನ ಆಚಾರ್ಯ, ಮಂಗಳೂರಿನ ಸುಂದರ ಆಚಾರ್ಯ, ಸೂರ್ಯಕುಮಾರ್ ಆಚಾರ್ಯ, ಸುಂದರ ಆಚಾರ್ಯ ಬೆಳುವಾಯಿ ಮೊದಲಾದವರು ಉಪಸ್ಥಿತರಿದ್ದರು.