ಉಜಿರೆ: ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿ ಅವರು ದೈಹಿಕವಾಗಿ ಬಂದಿಲ್ಲವಾದರೂ ಅವರು ಮಾನಸಿಕವಾಗಿ ನಮ್ಮೊಂದಿಗಿದ್ದಾರೆ. ಅವರು ಶ್ರೀ ಕ್ಷೇತ್ರದಲ್ಲಿ ನಡೆಸಿದ ಶ್ರೀ ರಾಮ ಕಥಾ ಸಪ್ತಾಹ ವಿಶೇಷ ಕಾರ್ಯಕ್ರಮ ನಮಗೆ ವಿಶೇಷ ಆಕರ್ಷಣೆ ಹಾಗೂ ಸಂತೋಷ ನೀಡಿದೆ. ಅವರು ಶ್ರೀ ಶಂಕರಾಚಾರ್ಯರಂತೆ ವಯಸ್ಸಿನಲ್ಲಿ ಕಿರಿಯರಾದರೂ ಜ್ಞಾನ ವೃದ್ಧರು. ಅವರು ವಿಶೇಷ ನಾಯಕತ್ವದ ಲಕ್ಷಣ ಹೊಂದಿದ್ದಾರೆ. ಅವರು ಕ್ಷೇತ್ರದ ಮೇಲಿನ ವಿಶೇಷ ಅಭಿಮಾನದಿಂದ ವಿದ್ವಾಂಸರನ್ನು ಕ್ಷೇತ್ರಕ್ಕೆ ಕಳಿಸುವ ಪ್ರೀತಿ ತೋರಿದ್ದಾರೆ. ಅವರ ವಿಶೇಷ ಗೌರವ, ಆಶೀರ್ವಾದ, ಅನುಗ್ರಹದಿಂದ ಕಷ್ಟದಿಂದ ಪಾರಾಗಿ ಕೊನೆಗೆ ಜಯ ಸಿಗಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಸೆ.19 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ಅನುಗ್ರಹದೊಂದಿಗೆ ಹವ್ಯಕ ಮಹಾಮಂಡಲದ ಶಿಷ್ಯ ವೃಂದ ಹಾಗೂ ವಿದ್ವಾಂಸರು ಶ್ರೀ ಮಂಜುನಾಥ ಸ್ವಾಮಿಗೆ ರುದ್ರಾನುಷ್ಠಾನ ಸಮರ್ಪಣೆ ಕಾರ್ಯಕ್ರಮದ ಬಳಿಕ ಮಾತನಾಡಿದರು.
ತಾವು ಗೋಕರ್ಣ ಕ್ಷೇತ್ರಕ್ಕೆ ಹೋಗಿದ್ದಾಗ ಶ್ರೀಗಳವರು ದೇವರ ದರ್ಶನ ಮಾಡಿಸಿ, ಗೌರವ ತೋರಿಸಿದ್ದಾರೆ. ಹಿಂದೆ ಅವರಿಗೂ ಅಪಪ್ರಚಾರ, ನಿಂದನೆಯಾಗಿತ್ತು. ಆದರೆ ಬೆಟ್ಟದ ನೀರು ಕೆಳಗಿಳಿಯುವಂತೆ ಕ್ರಮೇಣ ಜಯ ಲಭಿಸಿತ್ತು. ಶ್ರೀ ರಾಮನೂ ರಾವಣನಿಂದ ಹಿಂಸೆ ಅನುಭವಿಸಿ ಕೊನೆಗೆ ಜಯಶೀಲನಾದ. ಶ್ರೀಗಳವರ ಪರವಾಗಿ ನೀವೆಲ್ಲರೂ ಬಂದು ಆಶೀರ್ವಾದ ಮಾಡಿ ಗೌರವಿಸಿದ್ದೀರಿ. ಸಂತೋಷವಾಗಿದೆ. ನಿಮಗೆಲ್ಲರಿಗೂ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ ಎಂದು ಶುಭ ಹಾರೈಸಿದರು.
ಹವ್ಯಕ ಮಹಾಮಂಡಲದ ವತಿಯಿಂದ ಡಾ. ಹೆಗ್ಗಡೆಯವರು ಹಾಗೂ ಡಾ. ಹೇಮಾವತಿ ಹೆಗ್ಗಡೆಯವರನ್ನು ಗೌರವಿಸಲಾಯಿತು. ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಶ್ರೀ ಮಠದ ವೈದಿಕ ವಿದ್ವಾಂಸರಿಂದ ಡಾ. ಹೆಗ್ಗಡೆಯವರಿಗೆ ವಿಪ್ರಾಶೀರ್ವಾದ ನಡೆಯಿತು. ಹೆಗ್ಗಡೆಯವರು ರುದ್ರಾಧ್ಯಾಯಿಗಳಿಗೆ ಆಶೀರ್ವಚನ ನೀಡಿದರು. ಡಾ, ಹೆಗ್ಗಡೆಯವರು ಹವ್ಯಕ ಮಹಾಮಂಡಲದ ಸರ್ವರ ಪರವಾಗಿ ಘನಪಾಠಿ ಪಳ್ಳತ್ತಡ್ಕ ಶಂಕರನಾರಾಯಣ ಭಟ್ ಅವರನ್ನು ಗೌರವಿಸಿದರು.
ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 550ಕ್ಕೂ ಮಿಕ್ಕಿ ವಿದ್ವಾಂಸರು ಹಾಗೂ ಶಿಷ್ಯ ವೃಂದ ಬೆಳಗ್ಗೆ 10 ಗಂಟೆಯಿಂದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಾರ್ಥಿಸಿ, ಪ್ರವಚನ ಮಂಟಪದಲ್ಲಿ ರುದ್ರ ಪಾರಾಯಣ ಸೇವೆಯನ್ನು ಶ್ರೀ ಸ್ವಾಮಿಗೆ ಭಕ್ತಿ, ಗೌರವದಿಂದ ಸಮರ್ಪಿಸಿದರು.
ಶ್ರೀ ಮಠದ ಶಾಸ್ತ್ರಿಗಳಾದ ಘನಪಾಠಿ ಸುಚೇತನ ಶಾಸ್ತ್ರೀ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಂಡಲದ ಮಾತೃವಿಭಾಗದ ಅಧ್ಯಕ್ಷೆ ದೇವಿಕಾ ಶಾಸ್ತ್ರೀ, ಈಶ್ವರಿ ಬೇರ್ಕಡವು, ಕೈಲಾರು ರಾಜಗೋಪಾಲ ಭಟ್, ಉಜಿರೆಯ ಶಾಮ ಭಟ್ ಅತ್ತಾಜೆ, ಕೇಶವ ಭಟ್ ಅತ್ತಾಜೆ, ಮಹಾಮಂಡಲ, ಮಂಡಲ, ವಲಯಗಳ ಪದಾಧಿಕಾರಿಗಳು, ವೈದಿಕ ವಿದ್ವಾಂಸರು, ಗುರಿಕಾರರು, ಶಿಷ್ಯ ಬಂಧುಗಳು ಭಾಗವಹಿಸಿದ್ದರು. ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು, ಅನ್ನಪ್ರಸಾದ ಸ್ವೀಕರಿಸಿದರು.